-ಸಿಎಂ ಸಿದ್ದರಾಮಯ್ಯ ಆಡಳಿತವನ್ನು ಸಹಿಸದ ವಿಪಕ್ಷಗಳ ಸಂಚು: ಆರೋಪಕನ್ನಡಪ್ರಭ ವಾರ್ತೆ ಹೊಸಕೋಟೆ
ಮುಡಾ ನಿವೇಶನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಎಳ್ಳಷ್ಟು ಇಲ್ಲ. ವಿನಾಕಾರಣ ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ದಲಿತ ಸಂಘರ್ಷ ಸಮಿತಿ ಕರ್ನಾಟಕ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ತೀವ್ರ ವಾಗ್ದಾಳಿ ನಡೆಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಂಕರಹಿತ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಸಹಿಸದ ವಿಪಕ್ಷಗಳು ಅವರ ಹೆಸರನ್ನು ಹಾಳುಗೆಡವಲು ಅವರಿಗೆ ಸಂಬಂಧವೇ ಇಲ್ಲದ ವಿಷಯವಾಗಿರುವ ಹಾಗೂ ಅವರ ಪತ್ನಿಗೆ ತವರು ಮನೆಯಿಂದ ಬಂದಿರುವ ನಿವೇಶನದ ಬಗ್ಗೆ ಪ್ರಮುಖವಾಗಿ ಪಿಟಿಸಿಎಲ್ ಕಾಯ್ದೆಗೆ ಅನ್ವಯಿಸದೆ ಇರುವ ವಿಚಾರವನ್ನು ಮುಂದಿಟ್ಟುಕೊಂಡು ಕುತಂತ್ರ ಮಾಡುತ್ತಿದ್ದಾರೆ. ಈ ಹಿಂದೆ ಯಾರೂ ಕೂಡ ಈ ರೀತಿ ನಿವೇಶನ ಪಡೆದಿಲ್ವಾ? ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿ 14 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಪಾರದರ್ಶಕ ಆಡಳಿತ ನೀಡಿದ್ದು, ದಸಂಸಕ ಸಂಘಟನೆ ಅವರ ಬೆನ್ನಿಗೆ ಸದಾ ನಿಲ್ಲಲಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಬಗ್ಗೆ ಈಗಾಗಲೆ ಆ ಇಲಾಖೆಯ ಸಚಿವರಾದ ನಾಗೇಂದ್ರರ ರಾಜೀನಾಮೆ ನೀಡಿದ್ದು, ಅವರನ್ನೂ ಸೇರಿ ಇನ್ನಿಬ್ಬರ ಅಧಿಕಾರಿಗಳನ್ನು ಬಂಧಿಸಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ವಿನಾಕಾರಣ ವಾಲ್ಮೀಕಿ ಹಗರಣದ ಕೇಸಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ತಂದು ಅವರನ್ನು ಸಿಲುಕಿಸುವ ಸಂಚು ವಿಪಕ್ಷಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ನಿಗಮದ ಹಗರಣದಲ್ಲಿ ಯೂನಿಯನ್ ಬ್ಯಾಂಕ್‌ನಲ್ಲಿ 89 ಕೋಟಿ ವಹಿವಾಟು ಆಗಿದ್ದರೆ, ವ್ಯವಸ್ಥಾಪಕರನ್ನು ಏಕೆ ಇನ್ನು ಬಂಧಿಸಿಲ್ಲ ಎನ್ನುವುದನ್ನು ಸಹ ಚರ್ಚೆ ಮಾಡಲಿ. ಅವರ ಬಂಧನಕ್ಕೆ ಒತ್ತಾಯ ಮಾಡಲಿ ಎಂದರು.ಈ ವೇಳೆ ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಆಯುಷ್ಮಾನ್ ಅಣ್ಣಯ್ಯ, ವಿಭಾಗೀಯ ಸಂಚಾಲಕ ಐಆರ್ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಬೆನ್ನಿಗಾನಹಳ್ಳಿ ರಾಮಚಂದ್ರ, ನಾರಾಯಣಸ್ವಾಮಿ, ಲೋಕೇಶ್ ಇತರರಿದ್ದರು.