ಕನ್ನಡಪ್ರಭ ವಾರ್ತೆ ಹಾಸನ
ಇದೇ ವೇಳೆ ಮುಖಂಡರಾದ ಕೆ.ಪಿ. ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮದ ಸರ್ವೇ ನಂಬರ್ 38 ಹಾಗೂ 206ರಲ್ಲಿ ನಮ್ಮ ಗ್ರಾಮದ ರೈತರು ಅನೇಕ ವರ್ಷಗಳಿಂದ ನಿರಂತರವಾಗಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇತ್ತೀಚೆಗೆ ಭೂಮಿಯ ಕೆಳಭಾಗದಲ್ಲಿ ಕಲ್ಲು ಇರುವುದನ್ನು ನೆಪವಾಗಿಸಿಕೊಂಡು, ಹಣಬಲ ಹಾಗೂ ರಾಜಕೀಯ ಪ್ರಭಾವ ಹೊಂದಿರುವ ಕೆಲವರು ಈ ಜಮೀನಿನಲ್ಲಿ ಕಲ್ಲುಗಾಣಿಗಾರಿಕೆ ಮತ್ತು ಕ್ರಷರ್ ನಡೆಸಲು ಮುಂದಾಗಿದ್ದಾರೆ. ಈ ಕುರಿತು ನಾವು ತಾಲೂಕು ಕಚೇರಿಗಳನ್ನು ಸಂಪರ್ಕಿಸಿದಾಗ, ಈ ಜಮೀನು ಎಚ್.ಆರ್.ಪಿ ರಿಸರ್ವ್ ಲ್ಯಾಂಡ್ ಆಗಿರುವುದರಿಂದ ರೈತರಿಗೆ ಮಂಜೂರು ಮಾಡಲು ಸಾಧ್ಯವಿಲ್ಲ ಎಂಬ ಕಾರಣವನ್ನು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ, ಉಪವಿಭಾಗಾಧಿಕಾರಿಗಳು, ತಾಲೂಕು ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೇರಿ, ನಾವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನನ್ನು ಕಲ್ಲುಗಣಿಗಾರಿಕೆ ಉದ್ದೇಶಕ್ಕಾಗಿ ಮಂಜೂರು ಮಾಡುವ ಸಂಬಂಧ ಗ್ರಾಮದ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ, ಅರ್ಜಿದಾರರೊಂದಿಗೆ ಗೌಪ್ಯವಾಗಿ ಜಾಗದ ಮಹಜರ್ ನಡೆಸಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮತ್ತು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಮಂಜೂರಾಗಿರುವ ಕಲ್ಲುಗಾಣಿಗಾರಿಕೆ ಮತ್ತು ಕ್ರಷರ್ ಪರವಾನಗಿಗಳನ್ನು ತಕ್ಷಣವೇ ರದ್ದುಪಡಿಸಬೇಕು, ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಈ ಜಮೀನನ್ನು ಕಾನೂನುಬದ್ಧವಾಗಿ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಮಂಜೂರಾಗಿರುವ ಜಮೀನಿನಲ್ಲಿ ಉಂಟಾಗಿರುವ ಹಾನಿಯನ್ನು ದುರಸ್ಥಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಗ್ರಾಮದ ಮಂಜೇಗೌಡ, ಸುನೀಲ್, ವರ್ಧರಾಜು, ಗೌಡಪ್ಪ, ರಾಮಲಿಂಗೇಗೌಡ, ಕುಮಾರ್ ಇತರರು ಉಪಸ್ಥಿತರಿದ್ದರು.