ಡಾ। ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮನದಿಂದಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯ ಸಂಘಟನಾ ಚಟುವಟಿಕೆ ಇನ್ನಷ್ಟು ಬಿರುಸು ಪಡೆದಿದೆ
ಚಿಕ್ಕಬಳ್ಳಾಪುರ: ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮನದಿಂದಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯ ಸಂಘಟನಾ ಚಟುವಟಿಕೆ ಇನ್ನಷ್ಟು ಬಿರುಸು ಪಡೆದಿದೆ. ಕೇಂದ್ರದಿಂದ ಹೆಚ್ಚು ಅನುದಾನ ಹಾಗೂ ಯೋಜನೆಗಳನ್ನು ತರುವ ಉದ್ದೇಶದಿಂದ ಈ ಬಾರಿಯೂ ಬಿಜೆಪಿ ಗೆಲ್ಲಿಸಬೇಕೆಂದು ಕಾರ್ಯಕರ್ತರು ಸಂದೇಶ ರವಾನಿಸುತ್ತಿದ್ದಾರೆ. ಮೈತ್ರಿ ರಾಜಕೀಯದಿಂದಾಗಿ ಈ ಭಾಗದಲ್ಲೀಗ ಬಿಜೆಪಿ ಸಂಘಟನೆ ಇನ್ನಷ್ಟು ಬಲವಾಗುತ್ತಾ ಸಾಗಿದೆ.
ಹಿಂದಿನ ದಿನ ನಾಮಪತ್ರ ಸಲ್ಲಿಕೆಯ ರೋಡ್ ಶೋಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ಕುಮಾರಸ್ವಾಮಿ, ಡಾ। ಕೆ.ಸುಧಾಕರ್ ಅವರು ಉತ್ತಮ ವಾಗ್ಮಿ ಹಾಗೂ ಅಭಿವೃದ್ಧಿಯ ಚಿಂತಕರಾಗಿದ್ದು, ಸಂಸತ್ತಿನಲ್ಲಿ ಜನರ ಸಮಸ್ಯೆಗಳಿಗೆ ದನಿಯಾಗುವ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದ್ದರು. ಇದರಿಂದಾಗಿ ಜೆಡಿಎಸ್ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಬಂದಿದ್ದು, ಮೈತ್ರಿ ರಾಜಕೀಯದಡಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕೆಂಬ ಸೂಚನೆ ನೀಡಲಾಗಿದೆ.
ಅಲ್ಲದೆ, ಬಯಲುಸೀಮೆ ಭಾಗಕ್ಕೆ ಅಗತ್ಯವಾಗಿರುವ ಎತ್ತಿನಹೊಳೆ ಯೋಜನೆ, ಪ್ರತ್ಯೇಕ ಹಾಲು ಒಕ್ಕೂಟ, ಕೈಗಾರಿಕಾಭಿವೃದ್ಧಿ ಮೊದಲಾದವುಗಳ ಬಗ್ಗೆಯೂ ಸಂದೇಶ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಶೂನ್ಯವಾಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಾವುದೇ ವಿಧಾನಸಭಾ ಕ್ಷೇತ್ರಕ್ಕೂ ಅನುದಾನ ಬಂದಿಲ್ಲ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟರೆ ಬೇರಾವುದೇ ಯೋಜನೆಗಳು ಬಾರದಿರುವುದು ಖಾತರಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಯೋಜನೆಗಳನ್ನು ನೀಡುವುದಾಗಿ ಅಭ್ಯರ್ಥಿ ಡಾ। ಕೆ.ಸುಧಾಕರ್ ಭರವಸೆ ನೀಡಿದ್ದಾರೆ.
ಅಲ್ಲದೆ ಜಾತಿ ರಾಜಕಾರಣಕ್ಕೆ ಅಂಟಿಕೊಳ್ಳದೆ ಎಲ್ಲ ಜಾತಿ ಸಮುದಾಯಗಳನ್ನು ಒಂದಾಗಿ ಕರೆದೊಯ್ಯುವುದಾಗಿ ಡಾ। ಕೆ.ಸುಧಾಕರ್ ತಿಳಿಸಿದ್ದಾರೆ. ಈ ಸಂದೇಶಗಳನ್ನೇ ಕಾರ್ಯಕರ್ತರು ಪ್ರಚಾರ ಕಾರ್ಯದ ವೇಳೆ ಜನರ ಮನೆಮನೆಗೆ ತಲುಪಿಸುತ್ತಿದ್ದಾರೆ.
ಈ ಹಿಂದೆ ಬಿಜೆಪಿ ಈ ಭಾಗದಲ್ಲಿ ದುರ್ಬಲವಾಗಿದ್ದು, ಜೆಡಿಎಸ್ ಹೆಚ್ಚು ಶಕ್ತಿಯುತವಾಗಿದೆ. ಡಾ। ಕೆ.ಸುಧಾಕರ್ ಸಚಿವರಾಗಿದ್ದ ಸಮಯದಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣ ಹೆಚ್ಚಾಗಿತ್ತು. ಈಗ ಮೈತ್ರಿ ಇರುವುದರಿಂದ ಬಿಜೆಪಿಗೆ ಹೆಚ್ಚಿನ ಬಲ ಬಂದಿದ್ದು, ಪಕ್ಷದ ಸಂಘಟನೆ ಚುರುಕಾಗಿ ನಡೆಯುತ್ತಿದೆ. ಪರಸ್ಪರ ಸಹಕಾರವಿರುವುದರಿಂದ ಎರಡೂ ಪಕ್ಷಗಳ ಸಂಘಟನೆಗೆ ಹೊಸ ಚುರುಕು ದೊರೆತಿದೆ. ಈ ಭಾಗದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲವಾಗಿ ಬೆಳೆದಿದ್ದ ಕಾಂಗ್ರೆಸ್ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ದುರ್ಬಲವಾಗಿಸುವ ಗುರಿಯತ್ತ ಮುನ್ನಡೆಯಲಾಗುತ್ತಿದೆ.