ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ಸಮಸ್ಯೆ ತಪ್ಪಿಸಲು ಎಡಪಕ್ಷಗಳು ಹಾಗೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೈಬಿಟ್ಟು ಹೊಸ ಕಾಯ್ದೆ ಜಾರಿಗೊಳಿಸಿರುವುದು ಸರಿಯಲ್ಲ. ಶ್ರೀಮಂತರಿಗೆ ಅನುಕೂಲವಾಗುವಂಥ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವುದು ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ರೈತರ ಜೀವನಕ್ಕೆ ಮಾರಕವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಕೇಂದ್ರ ಸರ್ಕಾರ ಮನರೇಗಾ ಹೆಸರನ್ನು ವಿಬಿ- ಜಿ ರಾಮ್ ಜಿ ಎಂದು ಬದಲಿಸಿದ್ದು, ಆ ಮೂಲಕ ಗ್ರಾಮೀಣ ಭಾಗದ ಜನರಿಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡುತ್ತಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಆರೋಪಿಸಿದರು.ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಸಿಪಿಎಂ ಪಕ್ಷದ ವತಿಯಿಂದ ವಿಬಿ- ಜಿ ರಾಮ್ ಜಿ ಹೆಸರು ರದ್ದತಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಜ.30 ಮಹಾತ್ಮ ಗಾಂಧಿ ಹುತಾತ್ಮರಾದ ದಿನ. ಅವರನ್ನು ಕೊಲೆ ಮಾಡಿದ ದಿನ. ಇದೀಗ ಅವರ ಹೆಸರಿನಲ್ಲಿ ಜಾರಿಗೆ ತಂದ ಮನರೇಗಾ ಯೋಜನೆಯನ್ನು ಕೊಲೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಸದಾ ಉಳ್ಳವರ ಪರವೇ ಕೆಲಸ ಮಾಡುತ್ತದೆ. ಈ ಹಾದಿಯಲ್ಲೇ ಇದೀಗ ಮನರೇಗಾ ಯೋಜನೆಯನ್ನು ಬದಲಿಸುತ್ತಿದೆ. ವಿಬಿ- ಜಿ ರಾಮ್ ಜಿ ಎಂದು ಹೆಸರು ಬದಲಿಸಿ ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಮನರೇಗಾ ಕೂಲಿಕಾರರ ಹೊಟ್ಟೆ ಮೇಲೆ ಬರೆ ಎಳೆದಂತಿದೆ. ಮನರೇಗಾ ಯೋಜನೆ ಕಾಯ್ದೆ ರದ್ದು ಮಾಡಿರುವ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಈ ಯೋಜನೆ ಏಪ್ರಿಲ್ ಮಾಹೆಯಲ್ಲಿ ಜಾರಿಗೆ ಬರಲಿದೆ. ಹೊಸ ಕಾಯ್ದೆಯ ಮೂಲಕ ಭ್ರಷ್ಟಾಚಾರ ಸೇರಿದಂತೆ ಹಲವು ನ್ಯೂನ್ಯತೆಗಳನ್ನು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಅದೆಲ್ಲವೂ ಸುಳ್ಳಾಗಿದ್ದು, ಮನರೇಗಾ ಕಾಯ್ದೆ ಗ್ರಾಮೀಣರಿಗೆ ತುಂಬಾ ಉಪಯುಕ್ತವಾಗಿದೆ. ಅದನ್ನು ಮುಂದುವರಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಸಿಪಿಎಂ ಪಕ್ಷದ ಮುಖಂಡ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ಸಮಸ್ಯೆ ತಪ್ಪಿಸಲು ಎಡಪಕ್ಷಗಳು ಹಾಗೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೈಬಿಟ್ಟು ಹೊಸ ಕಾಯ್ದೆ ಜಾರಿಗೊಳಿಸಿರುವುದು ಸರಿಯಲ್ಲ. ಶ್ರೀಮಂತರಿಗೆ ಅನುಕೂಲವಾಗುವಂಥ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವುದು ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ರೈತರ ಜೀವನಕ್ಕೆ ಮಾರಕವಾಗುತ್ತಿದೆ. ಬಡವರ ವಿರೋಧಿ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.ಈ ಸತ್ಯಾಗ್ರಹದಲ್ಲಿ ಸಿಪಿಎಂ ತಾಲೂಕು ಸದಸ್ಯರಾದ ಬಿ. ಜಯರಾಮ್ ರೆಡ್ಡಿ, ತಾಲೂಕು ಕಾರ್ಯದರ್ಶಿ ವೆಂಕಟರಾಜು, ಆದಿನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ ಸೇರಿದಂತೆ ಮಸಣ ಕಾರ್ಮಿಕರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.