ಮತದಾರರ ಗಣತಿ ಅರ್ಜಿ ವಿತರಣೆಯಲ್ಲಿ ಜಿಲ್ಲೆಯಲ್ಲಿ ಶೇ. 98.16ರಷ್ಟು ಸಾಧನೆ: ಜಿಲ್ಲಾಧಿಕಾರಿ ಜಿ.ಪ್ರಭು
ಚುನಾವಣಾ ಆಯೋಗ ಎಸ್‌ಐಆರ್ ಜಾರಿಗೆ ತಂದಿದ್ದು, ಅರ್ಜಿ ವಿತರಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಈ ವರೆಗೆ ಶೇ. 98.16ರಷ್ಟು ಅರ್ಜಿ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮತದಾರರಿಗೆ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ‍್ಯಾಲಿಗೆ ಚಾಲನೆ ನೀಡುವ ಮುನ್ನ ಮಾತನಾಡಿ ಎಸ್‌ಐಆರ್‌ನಲ್ಲಿ ಒಬ್ಬ ಮತದಾರ 3 ಹಂತದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಅದರಲ್ಲಿ ಮೊದಲನೇಯ ಗಣತಿ ನಮೂನೆ ಮೂಲಕ ಮನೆ ಮನೆಗೆ ಭೇಟಿ ಮಾಡಿ ಅರ್ಜಿ ವಿತರಿಸಲಾಗುವುದು. ಯಾರು ಈ ಮೊದಲು ಮತದಾರರ ಪಟ್ಟಿಯಲ್ಲಿದ್ದಾರೆ ಅಂತಹವರೆಲ್ಲರಿಗೂ ಈ ಪ್ರಕ್ರಿಯೆ ಅನುಕೂಲವಾಗಿದೆಯೆಂದರು. ದ್ವಿಪ್ರತಿಗಳ ಮೂಲಕ ಗಣತಿ ನಮೂನೆಯನ್ನು ನಾವೇ ಮುದ್ರಿಸಿ ಅದನ್ನು ಮನೆ ಮನೆಗೆ ತಲುಪಿಸಿ ಅದನ್ನು ಭರ್ತಿ ಮಾಡಿಸಿಕೊಂಡು ಅವರ ಸಹಿಯೊಂದಿಗೆ ಹಿಂಪಡೆಯುವ ಅದನ್ನು ತಂತ್ರಾಂಶದಲ್ಲಿ ಅಳವಡಿಸುವುದು ಒಂದು ವಿಧಾನವಾಗಿದೆ ಎಂದರು. ವಿತರಣೆಯಲ್ಲಿ 98.16 ರಷ್ಟು ನಮೂನೆಯನ್ನು ತಲುಪಿಸಿದ್ದು, ತಲುಪಿಸಿರುವ ನಮೂನೆಯಲ್ಲಿ ಸ್ವೀಕಾರ ಮಾಡಿ ಅದನ್ನು ತಂತ್ರಾಂಶದಲ್ಲಿ ಅಳವಡಿಸಿದರೆ ಅದು ಕರಡು ಮತದಾರರ ಪಟ್ಟಿಯಾಗಿ ಸಿದ್ಧಗೊಳ್ಳುತ್ತದೆ. ಇಡೀ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ. ಇದಕ್ಕೆ ಎಲ್ಲಾ ಅಧಿಕಾರಿಗಳು, ಚುನಾವಣಾ ಪಕ್ಷಗಳು, ಮತದಾರರು, ಸಿಬ್ಬಂದಿ, ಅಧಿಕಾರಿಗಳು, ಬಿಎಲ್‌ಒ 1, ಬಿಎಲ್‌ಒ 2 ಸೇರಿದಂತೆ ಎಲ್ಲರ ಸಹಕಾರದಿಂದ ಶೇ. 35.45 ರಷ್ಟು ಡಿಜಿಟಲೀಕರಣ ಮಾಡಲಾಗಿದೆ ಎಂದು ತಿಳಿಸಿದರು. ಎರಡನೇ ಹಂತದಲ್ಲಿ ನೋಟಿಸ್ ನೀಡಿ ನಂತರ ಅದಕ್ಕೆ ಸಮರ್ಪಕ ಉತ್ತರ ನೀಡುವುದರ ಜೊತೆಗೆ ಘೋಷಣೆ ನೀಡಬೇಕು, ಚುನಾವಣಾ ಆಯೋಗ ನಿಗದಿ ಪಡಿಸಿದ 11 ದಾಖಲೆಗಳ ಪೈಕಿ ಒಂದನ್ನು ದಾಖಲೆಯಾಗಿ ನೀಡಬೇಕು. ಚುನಾವಣಾ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು. ಆಗ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುತ್ತಾರೆಂದರು. ಈ ಪ್ರಕ್ರಿಯೇ ಪ್ರಾರಂಭವಾಗುವುದು ಆಗಸ್ಟ್ 5 ರಿಂದ ಎಂದು ಸ್ಪಷ್ಟ ಪಡಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಮೂರನೇ ವಿಧಾನ ಆಗಸ್ಟ್ 5 ರಿಂದಲೇ ಪ್ರಾರಂಭವಾಗುತ್ತದೆ. ಅದಕ್ಕೆ ನಮೂನೆ ೬ರನ್ನು ನೀಡಲಾಗುತ್ತದೆ. ಅದಕ್ಕೆ ದಾಖಲೆಗಳನ್ನು ನೀಡಬೇಕು ಹಾಗೂ 6ರ ನಮೂನೆಯನ್ನು ದಾಖಲೆಗಳ ವಿಚಾರಣೆ, ಪ್ರತ್ಯೇಕ ನಮೂನೆಗಳು ಬೇಕಾಗಿರುವುದರಿಂದ ಗಣತಿ ನಮೂನೆ ಸುಲಭವಾಗಿದ್ದು ಅದನ್ನು ಅದಷ್ಟು ಬೇಗ ತುಂಬಿಸಿ ಅರ್ಜಿಗಳನ್ನು ಬಿಎಲ್‌ಒಗಳಿಗೆ ಹಿಂತಿರುಗಿಸಿದರೆ ಅನುಕೂಲವಾಗುತ್ತದೆಂದರು.ಇದಕ್ಕೆ ಸಂಬಂಧಿಸಿದಂತೆ ಬೈಕ್ ರ‍್ಯಾಲಿ ಜಿಲ್ಲಾ, ತಾಲೂಕು, ಗ್ರಾಮೀಣ ಹಾಗೂ ಮತಗಟ್ಟೆ ಸೇರಿದಂತೆ ನಾಲ್ಕು ಹಂತಗಳಲ್ಲಿ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ. ಇಆರ್‌ಒ, ಇಬ್ಬರೂ ಎಇಆರ್‌ಒ, ಸ್ವೀಪ್ ಚಟುವಟಿಕೆಗಳನ್ನು ನಿರ್ವಹಣೆ ಮಾಡುವ ಅಧಿಕಾರಿಗಳು ಇಒ, ನೋಡೆಲ್ ಅಧಿಕಾರಿಗಳಾಗಿ ಸಿಡಿಪಿಒ, ಬಿಇಒ ಅಧಿಕಾರಿಗಳಿದ್ದು ಬಿಆರ್‌ಪಿ, ಸಿಆರ್‌ಪಿಗಳು ಎಲ್ಲರ ಜವಾಬ್ದಾರಿ ಎಂಬ ಭಾವನೆಯೊಂದಿಗೆ ಎಸ್‌ಐಆರ್ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್.ಆನಂದ್, ಪೌರಾಯುಕ್ತ ಜಿ.ಎನ್.ಚಲಪತಿ, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ನಾಯಕ್, ಸಿಡಿಪಿಒ ಮಹೇಶ್ ಬಾಬು, ಬಿಇಒ ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಅಶೋಕ್‌ಕುಮಾರ್ ಪಿಡಿಒ ಮಂಜುನಾಥ್ ಸೇರಿದಂತೆ ಎಲ್ಲಾ ಅಧಿಕಾರಿ ವರ್ಗದವರು ಇದ್ದರು.