ರಸ್ತೆಗಳಿಗೆ ನದಿಗಳ ಹೆಸರಿಟ್ಟ ಚಿಕ್ಕಡಂಕನಕಲ್ ಗ್ರಾಮ ಪಂಚಾಯತ್

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಗ್ರಾಮದ ನವೀಕೃತಗೊಂಡ ರಸ್ತೆಗಳಿಗೆ ದೇಶದ ಹಾಗೂ ನಾಡಿನ ಸರ್ವ ಶ್ರೇಷ್ಠ ನದಿಗಳ ಹೆಸರು ಇಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ನದಿಗಳ ಶ್ರೇಷ್ಠತೆ ಮತ್ತು ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಚಿಕ್ಕಡಂಕನಲ್ ಗ್ರಾಪಂ ಮಾಡಿದೆ.

ಎಂ.ಪ್ರಹ್ಲಾದ

ಕನಕಗಿರಿ: ರಸ್ತೆಗಳಿಗೆ ನದಿಗಳ ಹೆಸರಿಡುವ ಮೂಲಕ ದೇಶ, ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಕಾರ್ಯ ನಡೆದಿದ್ದು, ಇದು ಜಿಲ್ಲೆಯ ಗಮನ ಸೆಳೆದಿದೆ.ಯಾವುದಾದರೂ ಅಭಿವೃದ್ಧಿ ಕಾರ್ಯಗಳಿಗೆ ಸ್ವಾತಂತ್ರ‍್ಯ ಹೋರಾಟಗಾರರು, ರಾಜಕೀಯ ನಾಯಕರು ಅಥವಾ ಸಿನಿಮಾ ನಟರ ಹೆಸರು ಇಡುವುದನ್ನು ಸಾಮಾನ್ಯ. ಆದರೆ, ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದಲ್ಲಿನ ರಸ್ತೆಗೊಂದು ನದಿಯ ಹೆಸರಿಡುವ ಮೂಲಕ ಇತರೆ ಗ್ರಾಪಂಗಳಿಗೆ ಮಾದರಿಯಾಗಿದೆ.ಗ್ರಾಮದ ನವೀಕೃತಗೊಂಡ ರಸ್ತೆಗಳಿಗೆ ದೇಶದ ಹಾಗೂ ನಾಡಿನ ಸರ್ವ ಶ್ರೇಷ್ಠ ನದಿಗಳ ಹೆಸರು ಇಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ನದಿಗಳ ಶ್ರೇಷ್ಠತೆ ಮತ್ತು ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಚಿಕ್ಕಡಂಕನಲ್ ಗ್ರಾಪಂ ಮಾಡಿದೆ.ಪಂಚಾಯತಿಯ ಸ್ವಂತ ಅನುದಾನದಲ್ಲಿ ಗ್ರಾಮದ ಪ್ರಮುಖ ೧೦ ರಸ್ತೆಗಳಿಗೆ ಹೇಮಾವತಿ, ತುಂಗಾಭದ್ರ, ಕೃಷ್ಣಾ, ವೇದಾವತಿ, ಗೋದಾವರಿ, ನೇತ್ರಾವತಿ, ಪಂಚಗಂಗಾ, ಶರಾವತಿ, ಕಪಿಲ, ಕಾವೇರಿ ನದಿಗಳ ಹೆಸರನ್ನು ಇಡಲಾಗಿದೆ. ಈ ಮೂಲಕ ಗ್ರಾಮದ ಜನರಿಗೆ ನದಿಗಳ ಹೆಸರುಗಳನ್ನು ಪರಿಚಯಿಸುವುದು ಮಾತ್ರವಲ್ಲದೆ, ನದಿಗಳ ಪ್ರಾಮುಖ್ಯತೆ ತಿಳಿಸಲಾಗಿದೆ.ಈಚೆಗೆ ಅಖಂಡ ಗಂಗಾವತಿ ತಾಲೂಕಿನ ಪಿಡಿಒಗಳ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಗ್ರಾಮೀಣ ಪ್ರದೇಶದಲ್ಲಾದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸುವ ಮೂಲಕ ಅವುಗಳಿಗೆ ಕವಿಗಳ, ದಾರ್ಶನಿಕರ ಹಾಗೂ ನದಿಗಳ ಹೆಸರು ಇಟ್ಟು ಗೌರವ ಸಲ್ಲಿಸಲು ಸೂಚಿಸಿದ್ದರು. ಸಚಿವರ ಸೂಚನೆಗೆ ಚಿಕ್ಕಡಂಕನಕಲ್ ಗ್ರಾಮದಲ್ಲಿ ಈ ಹೊಸ ಯೋಚನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದಲ್ಲದೆ ಜನ ಖುಷಿಯನ್ನೂ ಹಂಚಿಕೊಂಡಿದ್ದಾರೆ.ಸಚಿವ ಶಿವರಾಜ ತಂಗಡಗಿ ನಾಲ್ಕೈದು ತಿಂಗಳ ಹಿಂದೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕು ಬೈಲೂರು ಗ್ರಾಪಂಗೆ ಭೇಟಿ ನೀಡಿ ಅಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದು, ಅಲ್ಲಿಯ ಅಭಿವೃದ್ಧಿಯನ್ನು ತಮ್ಮ ಜಿಲ್ಲೆಯಲ್ಲೂ ವಿಸ್ತರಿಸಲು ಮುಂದಾಗಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ಗ್ರಾಮಸ್ಥರಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಇತ್ತ ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಗ್ರಾಮದ ಪ್ರಮುಖ ೧೦ ರಸ್ತೆಗಳಿಗೆ ನದಿಗಳ ಹೆಸರುಗಳ್ಳುಳ ನಾಮಫಲಕ ಅಳವಡಿಸಿದ್ದೇವೆ. ಇದರಿಂದ ಗ್ರಾಮಸ್ಥರು ಸಹ ಖುಷಿಯಾಗಿದ್ದಾರೆ ಎನ್ನುತ್ತಾರೆ ಚಿಕ್ಕಡಂಕನಕಲ್ ಪಿಡಿಒ ಹನುಮಂತಪ್ಪ.

Share this article