ನಾಳೆಯಿಂದ ಚಿಕ್ಕಮಗಳೂರು 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Sep 27, 2024 1:20 AM

ಸಾರಾಂಶ

ಚಿಕ್ಕಮಗಳೂರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 5ನೇ ಸಾಹಿತ್ಯ ಸಮ್ಮೇಳನ ಸೆ.28 ಹಾಗೂ 29 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಆಯ್ಕೆ । ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾಹಿತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 5ನೇ ಸಾಹಿತ್ಯ ಸಮ್ಮೇಳನ ಸೆ.28 ಹಾಗೂ 29 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

13 ವರ್ಷಗಳ ಬಳಿಕ ನಗರದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಕಸಾಪ ಮಾರ್ಗದರ್ಶನದೊಂದಿಗೆ ಹೋಬಳಿ ಘಟಕಗಳು, ನಗರ ಘಟಕ ಮತ್ತು ಮಹಿಳಾ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದು, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಆಯ್ಕೆಯಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದ ಉದ್ಘಾಟನೆಯನ್ನು ಬೆಂಗಳೂರು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ.ವೆಂಕಟೇಶ್ ನೆರವೇರಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು, ಶಾಸಕ ಎಚ್.ಡಿ. ತಮ್ಮಯ್ಯ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆಂದು ಹೇಳಿದರು.

ಡಾ. ಪಟೇಲ್ ಪಾಂಡು, ಎಂ.ಎಲ್. ಮೂರ್ತಿ, ಬಿಸಿಲೇಹಳ್ಳಿ ಸೋಮಶೇಖರ್, ಟಿ.ಡಿ. ರಾಜೇಗೌಡ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಎಸ್.ಎಲ್. ಭೋಜೇಗೌಡ, ನಯನಾ ಮೋಟಮ್ಮ, ಬೆಳ್ಳಿಪ್ರಕಾಶ್, ಗಾಯಿತ್ರಿ ಶಾಂತೇಗೌಡ, ಡಾ. ಅಂಶುಮಂತ್, ಬಿ.ಎಚ್. ಹರೀಶ್, ಎ.ಎನ್. ಮಹೇಶ್ ಭಾಗವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿಯನ್ನು ಆಶಾಕಿರಣ ಅಂಧಮಕ್ಕಳ ಶಾಲೆ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ ಬಿಡುಗಡೆ ಮಾಡಲಿದ್ದಾರೆಂದರು.

ಸಮ್ಮೇಳನದ ಅಂಗವಾಗಿ ಧ್ವಜಾರೋಹಣ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆಯೋಜಿಸಲಾಗುವುದು. ಸಮ್ಮೇಳನದಲ್ಲಿ ನಾಲ್ಕು ವಿವಿಧ ಗೋಷ್ಠಿಗಳು ಬಹಿರಂಗ ಅಧಿವೇಶನ ನಡೆಯಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಇಬ್ಬರು ಸಾಧಕರಾದ ಮಾಜಿ ಸಚಿವ ಸಿ.ಆರ್. ಸಗೀರ್ ಅಹಮದ್, ಹಿರಿಯ ವಕೀಲ ಬಿ.ಎಂ. ಲಕ್ಷ್ಮಣ್‌ಗೌಡ ಅವರಿಗೆ ಕನ್ನಡಶ್ರೀ ಪ್ರಶಸ್ತಿ, ಚುಟುಕು ಸಾಹಿತಿ ಅರವಿಂದ್ ದೀಕ್ಷಿತ್, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಚ್.ಎ. ನಾರಾಯಣಗೌಡ, ಬಿ.ತಿಪ್ಪೇರುದ್ರಪ್ಪ, ಅಪರ್ಣ ಜಯರಾಂ, ದಯಾನಂದ್ ಮಾವಿನಕೆರೆ, ರತೀಶ್, ಕಣಿವೇ ಚಂದ್ರೇಗೌಡ, ಸುರೇಶ್ ದೀಕ್ಷಿತ್, ವಾಸು ಪೂಜಾರಿ ಸೇರಿದಂತೆ 22 ಸಾಧಕರಿಗೆ ಕನ್ನಡ ಸಿರಿ ಸಾಧನೆ ಮನ್ನಣೆ ನೀಡಲು ನಿರ್ಧರಿಸಲಾಗಿದೆ ಎಂದರು.

ಸೆ.29 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ದೊಡ್ಡಕರುಬರಹಳ್ಳಿ ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಶ್ರೀ ಬಸವ ಮರುಳಸಿದ್ದ ಮಹಾ ಸ್ವಾಮಿ ಭಾಗವಹಿಸಲಿದ್ದು, ಗೌರಿ ಬಿದನೂರು, ಸ.ಪ್ರ.ದ ಕಾಲೇಜು ಪ್ರಾಂಶುಪಾಲ ಹಾಗೂ ಸಾಹಿತಿ ಡಾ. ರಮೇಶ್‌ಚಂದ್ರ ದತ್ತ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಕನ್ನಡಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಕಾರ್ಯದರ್ಶಿಗಳಾದ ಜಿ.ಬಿ. ಪವನ್, ಎಸ್.ಎಸ್. ವೆಂಕಟೇಶ್, ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 25 ಕೆಸಿಕೆಎಂ 9

Share this article