- ಮತ್ತೀಮರ ದಿವ್ಯ ಕಾರುಣ್ಯ ಆನಂದಾಶ್ರಮ, ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ
ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ 2 ನೇ ಸ್ಥಾನಕ್ಕೆ ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ತಿಳಿಸಿದರು.
ಗುರುವಾರ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶೌಚಾಲಯ, ಬಿಸಿಯೂಟ, ಆಟದ ಮೈದಾನ, ಶಾಲಾ ಕೊಠಡಿಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ರಾಜ್ಯದಲ್ಲೇ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಸ್ಥಾನಕ್ಕೆ ಬಂದಿತ್ತು. ಈಗ ಶೇ. 98 ರಷ್ಟು ಸಮೀಕ್ಷೆ ಮುಗಿಸಿದ್ದೇವೆ. 10 ಸಾವಿರ ಜನರು ಮಾತ್ರ ಬಿಟ್ಟು ಹೋಗಿದ್ದಾರೆ. ಗ್ರಾಮ ಪಂಚಾಯಿತಿಯವರು ಪತ್ತೆ ಹಚ್ಚಿ ಸಮೀಕ್ಷೆ ಮಾಡುತ್ತಾರೆ. ಶೇ.100 ರಷ್ಟು ಸಾಧನೆ ಮಾಡುತ್ತೇವೆ ಎಂದರು.ಈ ಶಾಲೆಯಲ್ಲಿ ವಿಶಾಲವಾದ ಮೈದಾನ ಇದೆ. ಹಣ್ಣಿನ ಗಿಡ, ತರಕಾರಿ ಬೆಳೆಯಬಹುದು.ಅರ್ಧ ಎಕರೆ ಅಡಕೆ ತೋಟ ಬೆಳೆದಿದ್ದಾರೆ. ಇದನ್ನು ನರೇಗ ಯೋಜನೆಯಡಿ ಸೇರಿಸಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಇಒ ಎಚ್.ಡಿ. ನವೀನ್ ಕುಮಾರ್ ಗೆ ಸೂಚಿಸಿದರು.
ಸಿಇಒ ಕೀರ್ತನ ಶಾಲೆ ಕೊಠಡಿಗೆ ಹೋಗಿ ಮಕ್ಕಳೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದರು.
ಶಾಲೆ ಮಕ್ಕಳು ಆಟದ ಜೊತೆಗೆ ಓದುವ ಬಗ್ಗೆಯೂ ಗಮನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್. ಕೀರ್ತನ ಮಕ್ಕಳಿಗೆ ಸಲಹೆ ನೀಡಿದರು. ಗುಬ್ಬಿಗಾ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ಕಾರ ಮಕ್ಕಳಿಗೆ ನೀಡಿದ ಶೂಗಳನ್ನು ವಿತರಣೆ ವೇಳೆ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯ ದರ್ಶಿ ಗೌರವ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್, ಶಾಲೆ ಮುಖ್ಯೋಪಾಧ್ಯಾಯ ಅಶೋಕ್, ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ನಾಯ್ಕ್, ಪಿಡಿಒ ಸೀಮಾ, ತಾಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಕಾರ್ಯ ನಿರ್ವಹಣಾಧಿಕಾರಿ ಮನೀಶ್, ಸಿಡಿಪಿಒ ವಿರೇಶ್, ಎಂಜಿನಿಯರ್ ಸಾಗರ್ ಮತ್ತಿತರರು ಇದ್ದರು.
ಮತ್ತೀಮರ ಸಮೀಪದ ಕಾರುಣ್ಯ ಆನಂದಾಶ್ರಮಕ್ಕೂ ಗುರುವಾರ ಬೆಳಿಗ್ಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಇಲ್ಲಿನವರಿಗೆ ಶವ ಸಂಸ್ಕಾರಕ್ಕೆ ಜಾಗ ಇಲ್ಲವಾಗಿದೆ. ಯಾರಾದರೂ ಸತ್ತರೆ ಶವ ಸಂಸ್ಕಾರಕ್ಕೆ ಸಮಸ್ಯೆಯಾಗುತ್ತದೆ ಎಂಬ ವಿಷಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ತಾಲೂಕು ಪಂಚಾಯಿತಿ ಇಒ ನವೀನ್ ಕುಮಾರ್‌ಗೆ ಸೂಚಿಸಿದರು.