ಶಿಕ್ಷಕರು ಕ್ಲಾಸ್ ರೂಮ್ ಬೋಧನೆಯಲ್ಲಿ ತಂತ್ರಜ್ಞಾನವನ್ನು ಸೃಜನಶೀಲತೆಯಿಂದ ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.
ಧಾರವಾಡ: ಶಿಕ್ಷಕರು ಕ್ಲಾಸ್ ರೂಮ್ ಬೋಧನೆಯಲ್ಲಿ ತಂತ್ರಜ್ಞಾನವನ್ನು ಸೃಜನಶೀಲತೆಯಿಂದ ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.
ನಗರದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಹಾಗೂ ಬೆಂಗಳೂರಿನ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್, ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನದ ಸಹಯೋಗದಲ್ಲಿ ಕವಿವಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿದ್ಯಾರ್ಥಿ ಕಲಿಕೆಯ ಮೌಲ್ಯಮಾಪನ ಮತ್ತು ಮೌಲ್ಯನಿರ್ಣಯ ತಂತ್ರಗಳು ಕುರಿತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳ ಗ್ರಹಿಕೆಗೆ ತಕ್ಕಂತೆ ಬೋಧನೆಯಲ್ಲಿ ಭಿನ್ನವಾದ ವಿಧಾನಗಳನ್ನು ಶಿಕ್ಷಕರು ಬಳಕೆ ಮಾಡಿಕೊಳ್ಳಬೇಕು. ಜೀವನ ಕೌಶಲ್ಯಗಳ ಕುರಿತು ತರಬೇತಿ ನೀಡುವುದು ಪ್ರಸಕ್ತ ದಿನದಲ್ಲಿ ಅಗತ್ಯವಾಗಿದೆ. ಶಿಕ್ಷಕರು ಉತ್ತಮ ದೇಹ ಭಾಷೆ ಜೊತೆಗೆ ಸಂವಹನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಜೊತೆಗೆ ಬೆರೆತು ಕಲಿಕಾ ಮತ್ತು ಬೋಧನೆಯಲ್ಲಿ ತೊಡಗಿಸಿಕೊಳ್ಳವ ಮೂಲಕ ಹೊಸದನ್ನು ಕಲಿಯಲು ಪ್ರಯತ್ನ ಮಾಡಬೇಕು. ಬೋಧನೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲು ಪ್ರಯತ್ನಿಸಬೇಕು ಎಂದರು.
ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ ಮಾತನಾಡಿ, ಶಿಕ್ಷಕರು ಬಹುಮಾಧ್ಯಮ ಸಾಧನಗಳನ್ನು ಸಮರ್ಪಕವಾಗಿ ಬೋಧನೆಯಲ್ಲಿ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಅರಿತು ಸೂಕ್ತವಾದ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಕರಿಮುನ್ನಿಸಾ ಸೈಯದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಲಕ್ಷ್ಮೀಪತಿ, ಕಾರ್ಯಾಗಾರದ ಸಂಯೋಜಕರಾದ ಡಾ. ಎಸ್. ಶ್ರೀನಿವಾಸ, ಕವಿವಿ ವ್ಯಾಪ್ತಿಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ತಲ್ಲೂರ, ಪ್ರೊ.ಅಫ್ತಾಬ್ ಭಾಯಿ, ಡಾ. ವಿಜಯಲಕ್ಷ್ಮೀ ದಾನರೆಡ್ಡಿ, ಡಾ. ಶ್ರೀನಿವಾಸ ಇದ್ದರು.