ಗ್ಯಾರಂಟಿ ಅನುಷ್ಠಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನ : ಎಚ್‌.ಎಂ. ರೇವಣ್ಣ

KannadaprabhaNewsNetwork |  
Published : Nov 26, 2024, 12:47 AM ISTUpdated : Nov 26, 2024, 01:06 PM IST
ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಎಚ್‌.ಎಂ. ರೇವಣ್ಣ ಅವರು ಉದ್ಘಾಟಿಸಿದರು. ಸಚಿವ ಕೆ.ಜೆ. ಜಾರ್ಜ್‌, ಶಾಸಕ ಟಿ.ಡಿ. ರಾಜೇಗೌಡ, ಡಾ. ಪುಷ್ಪಾ ಅಮರ್‌ನಾಥ್‌, ಡಾ. ಅಂಶುಮಂತ್‌, ಎ.ಎನ್. ಮಹೇಶ್‌, ಬಿ.ಎಚ್‌. ಹರೀಶ್‌, ಶಿವಾನಂದಸ್ವಾಮಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ ಹೇಳಿದರು.

 ಚಿಕ್ಕಮಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ ಹೇಳಿದರು.

ಜಿಲ್ಲಾ ಪಂಚಾಯ್ತಿ ಕಚೇರಿ ಕಟ್ಟಡದಲ್ಲಿ ತೆರೆಯಲಾಗಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಕಾಂಗ್ರೆಸ್‌ ಸರ್ಕಾರ ನಡೆದು ಕೊಂಡಿದೆ. ಕೊಟ್ಟ 165 ಭರವಸೆಗಳಲ್ಲಿ ಈಗಾಗಲೇ 158 ಭರವಸೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ ಗ್ಯಾರಂಟಿ ಅನುಷ್ಠಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದರು.

ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದಿದ್ದರು. ದೇವರಾಜ್ ಅರಸ್‌ ಕಾಲದಲ್ಲಿ ಉಳುವವನೆ ಭೂಮಿ ಒಡೆಯ ಕಾನೂನು ಜಾರಿಗೆ ಬಂದಿತು. ಎಸ್‌. ಬಂಗಾರಪ್ಪ ಸಿಎಂ ಆಗಿದ್ದಾಗ 10 ಎಚ್‌ಪಿವರೆಗೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌, ವೀರಪ್ಪ ಮೊಯ್ಲಿ ಕಾಲದಲ್ಲಿ ಕಾಲೇಜು ಸೀಟು ಹಂಚಿಕೆಯಲ್ಲಿ ಸಿಇಟಿ ಪದ್ಧತಿ, ಎಸ್‌.ಎಂ. ಕೃಷ್ಣ ಸಿಎಂ ಆಗಿದ್ದಾಗ ಬಿಸಿಯೂಟ ಪದ್ಧತಿ ಜಾರಿಗೆ ತರಲಾಯಿತು. ಹೀಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿತ್ತು ಎಂದು ಹೇಳಿದರು.

ಕಾಂಗ್ರೆಸ್‌ ಬದುಕಿನ ಬಗ್ಗೆ ಮಾತನಾಡುತ್ತದೆ. ಆದರೆ, ಬಿಜೆಪಿ ಭಾವನೆ ಮುಂದಿಟ್ಟು ರಾಜಕಾರಣ ಮಾಡುತ್ತದೆ. ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದ್ದರು. ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ. ಒಂದು ವರ್ಷದಲ್ಲಿ 3 ಕೋಟಿ ಉದ್ಯೋಗ ಕೊಡುವ ಅವರ ಭರವಸೆಗಳು ಏನಾದವು. ಅವುಗಳೆಲ್ಲವೂ ಬರೀ ಮನ್‌ಕೀ ಬಾತ್‌ನಲ್ಲಿ ಉಳಿದುಕೊಂಡಿವೆ ಎಂದು ಟೀಕಿಸಿದರು.

ಇಡೀ ದೇಶದಲ್ಲಿ ಗ್ಯಾರಂಟಿ ಕಾರ್ಯಕ್ರಮ ಜಾರಿಗೆ ತಂದಿದ್ದು ಕಾಂಗ್ರೆಸ್‌ ಪಕ್ಷ, ಈ ಯೋಜನೆಗಳು ಶೇ. 98 ರಷ್ಟು ಜಾರಿಯಾಗಿ, ಯಶಸ್ವಿಯೂ ಆಗಿವೆ. ಈ ಕುರಿತು ಬಿಜೆಪಿಯವರು ಕಿಂಡಲ್‌ ಮಾಡ್ತಾ ಇದ್ರು, ಅತ್ತೆಗೆ ಕೊಡ್ತಿರೋ, ಸೊಸೆಗೆ ಕೊಡ್ತಿರೆಂದು. ಸುಳ್ಳು ಅವರ ಮನೆ ದೇವ್ರು, ಜನರ ಬದುಕಿನ ಬಗ್ಗೆ ಅವರಿಗೆ ಚಿಂತೆ ಇಲ್ಲ. ಮಹಿಳೆಯರ ಆರ್ಥಿಕ ಸ್ಥಿತಿಗತಿ ಸುಧರಿಸಿದೆ. ಸಬಲೀಕರಣ ಆಗಿದೆ. ಪ್ರಧಾನಿ ಹೇಳಿದ್ದರು ಬೇಟಿ ಬಚಾವೋ, ಬೇಟಿ ಪಟವೋ ಎಂದಿದ್ದರು. ಅವರಾಡಿದ್ದ ಮಾತುಗಳು ಬರೀ ಮಾತಾಗಿ ಉಳಿದುಕೊಂಡಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ದೇಶದಲ್ಲಿ ಸುಮಾರು 5.61 ಕೋಟಿ ಪಡಿತರ ಚೀಟಿಗಳನ್ನು ತಡೆ ಹಿಡಿದಿದೆ. ಇವುಗಳನ್ನು ಪರಿಶೀಲಿಸುವಂತೆ ಆಯಾಯ ಸರ್ಕಾರ ಗಳಿಗೆ ಹೇಳಿದೆ. ಆದರೆ, ನಮ್ಮ ರಾಜ್ಯ ಸರ್ಕಾರ ಯಾವುದೇ ಬಿಪಿಎಲ್‌ ಕಾರ್ಡನ್ನು ತಡೆ ಹಿಡಿದಿಲ್ಲ. ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್‌ ಪಡೆದಿದ್ದರೆ ಅವುಗಳನ್ನು ತಡೆ ಹಿಡಿಯುವ ಕೆಲಸ ಮಾಡಿದೆ. ಈ ವಿಷಯದಲ್ಲಿ ಬಿಜೆಪಿ ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿಲ್ಲ. ಎಲ್ಲರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಆದರೆ, ಕೆಲವರಿಗೆ ಇದು ಹಿಡಿಸುತ್ತಿಲ್ಲ. ಬಡವರಿಗೆ ತುಳಿತಕ್ಕೆ ಒಳಗಾದ ಜನರ ಹಿತದೃಷ್ಠಿಯಿಂದ ಕಾಂಗ್ರೆಸ್‌ ಸರ್ಕಾರ ಈ ರೀತಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿದರು. ಶಾಸಕ ಟಿ.ಡಿ. ರಾಜೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರ್‌ನಾಥ್‌, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್‌, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್‌. ಹರೀಶ್‌, ರಾಜ್ಯ ಪರಿಸರ ಮೌಲ್ಯ ಮಾಪನಾ ಸಮಿತಿ ಅಧ್ಯಕ್ಷ ಎ.ಎನ್‌. ಮಹೇಶ್‌, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಉಪಸ್ಥಿತರಿದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ