- ನಿರೀಕ್ಷಿತ ಆದಾಯ- 121.04 ಕೋಟಿ ರು., ಹಳೆಯ ಯೋಜನೆಗಳು ಪುನಃ ಪ್ರಸ್ತಾಪ- ಬಿಜೆಪಿ ಸದಸ್ಯರ ವಿರೋಧ
ಮುಂಬರುವ 2024-25ನೇ ಸಾಲಿನಲ್ಲಿ ಚಿಕ್ಕಮಗಳೂರು ನಗರಸಭೆ 121.04 ಕೋಟಿ ರು. ಆದಾಯ ನಿರೀಕ್ಷಿಸಿದೆ. 117.79 ಕೋಟಿ ವಿವಿಧ ಯೋಜನೆಗಳಿಗೆ ವೆಚ್ಚ ಮಾಡಲು ಉದ್ದೇಶಿಸಿದ್ದು, 3.24 ಕೋಟಿ ರುಪಾಯಿ ಉಳಿತಾಯ ನಿರೀಕ್ಷಿಸಿ ಬಜೆಟ್ ಮಂಡಿಸಿದೆ.
ನಗರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಬಜೆಟ್ ಮಂಡನೆ ಮಾಡಿದರು. ಅವರು ಬಜೆಟ್ ಓದಲು ಆರಂಭಿಸುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ನಗರಸಭೆ ಸದಸ್ಯರು ಕೆಲವು ವಿಷಯವಾಗಿ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ, ಗೊಂದಲದ ನಡುವೆಯೇ ಅಧ್ಯಕ್ಷರು ಬಜೆಟ್ ಮಂಡಿಸಿದರು.ಸಾರ್ವಜನಿಕರ ಆಸ್ತಿಯನ್ನು ಡಿಜಿಟೀಕರಣ ಮಾಡಲಾಗುತ್ತಿದೆ. ಹಾಗಾಗಿ ಯಾವುದೇ ಮಾಲೀಕರು ಕಂದಾಯವನ್ನು ಕದಿಯಲು ಸಾಧ್ಯವಿಲ್ಲ. ಇದರಿಂದಾಗಿ ಕಂದಾಯದ ಲೆಕ್ಕಚಾರ ಪಾರದರ್ಶಕವಾಗಿರುತ್ತದೆ. ಈಗಾಗಲೇ 26 ಸಾವಿರಕ್ಕೂ ಹೆಚ್ಚಿನ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಕಂದಾಯ ಸಂಗ್ರಹದಲ್ಲಿ ಚಿಕ್ಕಮಗಳೂರು ನಗರಸಭೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಕೇಂದ್ರ ಸರ್ಕಾರ ನಮಗೆ ವಿಶೇಷವಾಗಿ ಪುರಸ್ಕರಿಸಿ, ನಗರದ ಅಭಿವೃದ್ಧಿಗೆ 6 ಕೋಟಿ ರು. ನೀಡಲು ಮುಂದಾಗಿದೆ ಎಂದರು.
ಕಳೆದ 2023-24ನೇ ಸಾಲಿನಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಘೋಷಣೆಯಾದ ಕೆಲಸಗಳನ್ನು ಮತ್ತೆ 2024-25ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದೀರಾ, ನಿಮ್ಮ ಅವಧಿಯಲ್ಲಿ ನಗರದಲ್ಲಿ ಆಗಿರುವ ಒಂದಾದರೂ ಕೆಲಸ ತೋರಿಸಿ ಎಂದು ಸದಸ್ಯ ಟಿ. ರಾಜಶೇಖರ್ ಪ್ರಶ್ನಿಸಿದರು.
ನಿಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪಕ್ಷಕ್ಕೆ ಮೋಸ ಮಾಡಿದ್ದೀರಾ ಎಂದು ಸದಸ್ಯ ಮಧುಕುಮಾರ್ ರಾಜ್ ಅರಸ್ ಹೇಳುತ್ತಿದ್ದಂತೆ ಇತ್ತೀಚೆಗೆ ನಗರದ 60 ಅಡಿ ರಸ್ತೆಯಲ್ಲಿ ನಗರಸಭೆ ಅಧ್ಯಕ್ಷರೊಂದಿಗೆ ಅನುಚಿತವಾಗಿ ವರ್ತಿಸಿ ದ್ದೀರಾ, ನಗರದ ಪ್ರಥಮ ಪ್ರಜೆಯನ್ನು ಆ ರೀತಿಯಲ್ಲಿ ನಡೆಸಿಕೊಂಡಿದ್ದೀರಾ, ಕೈ ಕೈ ಮಿಲಾಯಿಸಲು ಹೋಗಿದ್ದೀರಾ ಎಂದು ಕಾಂಗ್ರೆಸ್‌ನ ನಗರಸಭೆ ಸದಸ್ಯ ಲಕ್ಷ್ಮಣ್ ಹೇಳಿದರು.
ಗೊಂದಲದ ನಡುವೆ ಬಜೆಟ್‌ಗೆ ಒಪ್ಪಿಗೆ ಸೂಚಿಸಲಾಯಿತು. ಸಭೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಚ್.ಡಿ. ತಮ್ಮಯ್ಯ, ಪೌರಾಯುಕ್ತ ಬಿ.ಸಿ. ಬಸವರಾಜ್ ಉಪಸ್ಥಿತರಿದ್ದರು.26 ಕೆಸಿಕೆಎಂ 1