ವೆಂಕಟೇಶ್ ಕಲಿಪಿ
ಮಗುವಿನ ಪಾಲನಾ ಹಕ್ಕು ಎನ್ನುವುದು ಒಬ್ಬ ಪೋಷಕರಿಗೆ ನೀಡುವ ಬಹುಮಾನವೂ ಅಲ್ಲ ಅಥವಾ ಇನ್ನೊಬ್ಬ ಪೋಷಕರಿಗೆ ವಿಧಿಸುವ ಶಿಕ್ಷೆಯೂ ಅಲ್ಲ. ಅದು ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಪೋಷಕರೊಬ್ಬರಿಗೆ ವಹಿಸಿಕೊಡಲಾದ ಜವಾಬ್ದಾರಿ. ಅದನ್ನು ಕೇವಲ ಆರ್ಥಿಕ ಸಂಪನ್ಮೂಲ ಅಥವಾ ಭೌತಿಕ ಸೌಕರ್ಯಗಳ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಮಗುವನ್ನು ಯುನೈಟೆಡ್ ಕಿಂಗ್‌ಡಮ್‌ಗೆ (ಯುಕೆ) ಕರೆದೊಯ್ಯಲು ತಾಯಿಗೆ ಅನುಮತಿ ನೀಡಿದೆ.
ಪತಿಯ ಆಕ್ಷೇಪದಿಂದ ಮಗುವನ್ನು ಇಂಗ್ಲೆಂಡ್‌ಗೆ ಕರೆದೊಯ್ಯಲಾಗದೆ, ಅಲ್ಲಿನ ವೈದ್ಯ ವೃತ್ತಿಯನ್ನು ಬಿಟ್ಟು ಭಾರತದಲ್ಲಿ ನೆಲೆಸಲೂ ಆಗದೆ ತೀವ್ರ ತೊಳಲಾಟಕ್ಕೆ ಸಿಲುಕಿದ್ದ ಮಹಿಳೆಗೆ ನ್ಯಾಯಾಲಯ ಈ ಮೂಲಕ ನೆಮ್ಮದಿ ನೀಡಿದೆ.ಬೆಂಗಳೂರಿನಲ್ಲಿ ನೆಲೆಸಿದ್ದ ಪತ್ನಿ, ಅಪ್ರಾಪ್ತ ಮಗನನ್ನು ಯುಕೆಗೆ ಕರೆದೊಯ್ದು ನೆಲೆಸಲು ಅನುಮತಿ ನೀಡಿದ್ದ ಮತ್ತು ಮಗನ ವೀಸಾ ಪಡೆಯಲು ಯುಕೆ ಕಾನ್ಸಲೇಟ್ ಮುಂದೆ ಒಪ್ಪಿಗೆ ಸೂಚಿಸುವಂತೆ ತನಗೆ ನಿರ್ದೇಶಿಸಿ 2025ರ ಏ.16ರಂದು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ ಆದೇಶ ರದ್ದು ಕೋರಿ ಮುಂಬೈನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಗ ನನ್ನೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾನೆ. ಆತನನ್ನು ಪೋಷಿಸಲು ಸಾಕಷ್ಟು ಆರ್ಥಿಕ ಸಾಮರ್ಥ್ಯ ಹೊಂದಿದ್ದೇನೆ. ಯುಕೆಗೆ ಹೋದರೆ, ಮಗನೊಂದಿಗೆ ಸಮಯ ಕಳೆಯಲಾಗುವುದಿಲ್ಲ ಎಂದು ವಾದಿಸಿದ್ದರು.
ಈ ವಾದ ಒಪ್ಪದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಪೀಠ, ತಂದೆಯು ಯುಕೆಯಿಂದ ಮಗನೊಂದಿಗೆ ದೂರವಾಣಿ ಹಾಗೂ ವಿಡಿಯೋ ಕರೆಗಳ ಮೂಲಕ ನಿತ್ಯ 20 ನಿಮಿಷ ಮಾತನಾಡಲು, ಶಾಲಾ ರಜಾದಿನಗಳಲ್ಲಿ ಶೇ.75ರಷ್ಟು ಭಾಗವನ್ನು ತಂದೆಯ ಜತೆಗೆ ಭಾರತದಲ್ಲೇ ಸಮಯ ಕಳೆಯಲು ಸಹಕರಿಸಬೇಕು ಎಂದು ತಾಯಿಗೆ ಷರತ್ತು ವಿಧಿಸಿ, ಮಗನನ್ನು ಯುಕೆಗೆ ಕರೆದೊಯ್ಯಲು ತಾಯಿಗೆ ಅನುಮತಿಸಿದೆ.
ಮಗುವಿನ ಕಲ್ಯಾಣವೇ ಮುಖ್ಯ:
ಅಲ್ಲದೆ, ಒಬ್ಬ ಪೋಷಕರು ಆರ್ಥಿಕವಾಗಿ ಸುಭದ್ರರಾಗಿರಬಹುದು. ಸೂಕ್ತ ವಸತಿ ಸೌಕರ್ಯ ಹೊಂದಿರಬಹುದು. ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸಲು ಸಿದ್ಧರಿರಬಹುದು. ಇವು ಪರಿಗಣಿಸಬೇಕಾದ ಅಂಶಗಳಾಗಿದ್ದರೂ, ಕೇವಲ ಅವುಗಳ ಆಧಾರದ ಮೇಲೆಯೇ ಮಗುವಿನ ಪಾಲನಾ ಹಕ್ಕು ನಿರ್ಧರಿಸುವುದು ಮಗುವಿಗೆ ಹಿತಕರವಲ್ಲ. ಮಗುವನ್ನು ನಿತ್ಯ ಆರೈಕೆ ಮಾಡುವ ಮುಖ್ಯ ವ್ಯಕ್ತಿಯೊಂದಿಗೆ ಬೆಳೆದಿರುವ ಭಾವನಾತ್ಮಕ ಬಾಂಧವ್ಯ, ಆರೈಕೆಯಲ್ಲಿನ ನಿರಂತರತೆ ಮತ್ತು ಈಗಿರುವ ವ್ಯವಸ್ಥೆ ಬದಲಾಯಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳು ಕೂಡ ಅಷ್ಟೇ ಮುಖ್ಯವಾಗಿ ಪರಿಗಣಿಸಬೇಕು. ತಂದೆ-ತಾಯಿ ಬೇರ್ಪಟ್ಟರೂ, ಮಗುವಿಗೆ ಅವರಿಬ್ಬರ ಪ್ರೀತಿ ಮತ್ತು ಸಾಂಗತ್ಯದ ಅಗತ್ಯವಿರುತ್ತದೆ. ಅವರಿಬ್ಬರೊಂದಿಗೂ ಅರ್ಥಪೂರ್ಣ ಸಂಬಂಧ ಮುಂದುವರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಕೋರ್ಟ್‌ನ ಜವಾಬ್ದಾರಿ. ಇದರಿಂದ ಮಗನನ್ನು ಯುಕೆಗೆ ಕರೆದೊಯ್ಯಲು ತಾಯಿಗೆ ಅನುಮತಿಸಲಾಗುತ್ತಿದೆ. ಮಗನು ತಂದೆಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಾಯಿ ಸಹಕಾರ ನೀಡಬೇಕು ಎಂದು ಇದೇ ವೇಳೆ ಪೀಠ ಆದೇಶಿಸಿದೆ.