ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಾಲಕಾರ್ಮಿಕ ಪದ್ಧತಿ ಸಮಾಜದಲ್ಲಿ ಒಂದು ಕಳಂಕವಾಗಿದೆ. ಈ ವ್ಯವಸ್ಥೆಯಿಂದ ಮಕ್ಕಳನ್ನು ದೂರವಿಟ್ಟು ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಎಲ್ಲ ಜವಾಬ್ದಾರಿಯೊಂದಿಗೆ ಕರ್ತವ್ಯ ಕೂಡ ಆಗಿದೆ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ.ವಡಿಗೇರಿ ಹೇಳಿದರು.ತಾಲೂಕಿನ ಮುದ್ದನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಕಾರ್ಮಿಕ ಇಲಾಖೆ, ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ತಾಲೂಕು ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ಹಾಗೂ ವಿಶ್ವ ಜಲ ದಿನ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಲಕಾರ್ಮಿಕ ಎಂಬ ಪದ್ಧತಿ ಅನಿಷ್ಟ ಪದ್ಧತಿಯಾಗಿದ್ದು, ಇದನ್ನು ಕೊನೆಗಾಣಿಸಲು ಅನೇಕ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದರು.
ಇದನ್ನು ಶಾಲಾ ಕಾಲೇಜುಗಳ ಮಕ್ಕಳಿಗೆ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಪೋಷಕರು, ಶಿಕ್ಷಕರು ಬಾಲಕಾರ್ಮಿಕ ವಿರೋಧಿ ಚಟುವಟಿಕೆಗಳನ್ನು ಹೆಚ್ಚಾಗಿ ಪ್ರಚಾರ ಮಾಡುವುದರ ಮೂಲಕ ಮಕ್ಕಳನ್ನು ಜೀತ ಪದ್ಧತಿ ಮತ್ತು ಬಾಲಕಾರ್ಮಿಕ ವ್ಯೂಹದಿಂದ ಪಾರು ಮಾಡಬೇಕಿದೆ. ಶಿಕ್ಷಣದ ಜೊತೆಯಲ್ಲಿ ಮಕ್ಕಳ ಮನಸ್ಸಿನಲ್ಲಿ ಭವಿಷ್ಯದ ಬಗ್ಗೆ ಅವರಲ್ಲಿ ಕನಸುಗಳನ್ನು ಬಿತ್ತಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನಗಳು ಮಾಡಬೇಕು. ಮಕ್ಕಳಲ್ಲಿ ಅನೇಕ ಅದ್ಭುತ ಪ್ರತಿಭೆಗಳಿದ್ದು, ಅವುಗಳನ್ನು ಪೋಷಿಸಿದಲ್ಲಿ ಉತ್ತಮ ಗಣ್ಯ ವ್ಯಕ್ತಿಗಳಾಗಿ ಹೊರಹೊಮ್ಮಲಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ ಮಕ್ಕಳಿಗೆ ಶಿಕ್ಷಣ ಕಲಿಕೆ ಉಚಿತವಾಗಿದ್ದು, ಊಟ, ವಸತಿ, ಪಠ್ಯ ಸಾಮಾಗ್ರಿಗಳ ಸೌಲಭ್ಯಗಳು ಉಚಿತವಾಗಿವೆ. ಅವುಗಳ ಮೂಲಕ ಮಕ್ಕಳಿಗೆ ಶಿಕ್ಷಕರು ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಕಾನೂನಿನ ಅರಿವಿನ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಆ ನಿಟ್ಟಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಎಲ್ಲಾ ರೀತಿಯ ಸಲಹೆ, ಮಾರ್ಗದರ್ಶನ ನೀಡಲು ಸಿದ್ಧವಿದೆ ಎಂದು ತಿಳಿಸಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಎನ್ ಯಮುನಾ ಮಾತನಾಡಿ, ಕಾರ್ಮಿಕ ಇಲಾಖೆಯು ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರುದ್ಧ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಅವರುಗಳೇ ದೇಶದ ಆಧಾರಸ್ತಂಭಗಳಾಗಿದ್ದಾರೆ. ನ್ಯಾಯಾಂಗ ಇಲಾಖೆಯು ನಮ್ಮ ಇಲಾಖೆಯೊಂದಿಗೆ ಕೈಜೋಡಿಸಿ ಬಾಲಕಾರ್ಮಿಕ ವಿರೋಧಿ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವುದು ನಮ್ಮ ಇಲಾಖೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಅತ್ಯಮೂಲ್ಯವಾಗಿದ್ದು, ಅಂತರ್ಜಲ ಸಂರಕ್ಷಣೆ ಮಾಡುವುದರ ಮೂಲಕ ಪ್ರತಿಯೊಬ್ಬರಿಗೂ ಶುದ್ಧ ನೀರು ದೊರಕುವಂತೆ ಕಾರ್ಯಪ್ರವೃತ್ತರಾಗಬೇಕಿದೆ. ವಿಶ್ವಕ್ಕೆ ಜಲದ ಅವಶ್ಯಕತೆ ಇದ್ದು, ಜನ ಸಂರಕ್ಷಣೆ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸಲು ವಿಶ್ವ ಜಲದಿನ ಆಚರಿಸಲಾಗುತ್ತಿದೆ. ಎಲ್ಲರೂ ಅಂತರ್ಜಲ ಉಳಿಸೋಣ, ವಿಶ್ವದ ಉಳಿವಿಗಾಗಿ ಕೊಡುಗೆ ನೀಡೋಣ ಎಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಗುರುಮೂರ್ತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಿ ಸದಾನಂದ ಮಾನಾಡಿದರು. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಯಶೋದಮ್ಮ, ಕಾರ್ಮಿಕ ನಿರೀಕ್ಷಕರಾದ ವೈ.ಎನ್ ಶಶಿಕಲಾ , ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಶಿವಾನಂದ ರಡ್ಡರಹಟ್ಟಿ, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸೆಕ್ಟರ್ ದಿಲೀಪ್ ಕುಮಾರ್, ಸಿಆರ್‌ಪಿ ವಿಷ್ಣುವರ್ಧನ್, ಸುಷ್ಮಾ, ಲೀಲಾಬಾಯಿ, ಸುರೇಶ ನಾಯಕ್, ಸಂಪತ್ ನಾಯಕ , ಅನಿಲ್ ಕುಮಾರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.