ಸೋಮರಡ್ಡಿ ಅಳವಂಡಿ ಕೊಪ್ಪಳ
ಹೌದು, ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಮದುವೆ ಸಿದ್ಧತೆ ಭರದಿಂದ ನಡೆಯುತ್ತಿತ್ತು. ಬಾಲಕಿಯಾಗಿದ್ದರೂ ಆಕೆಯ ಆಧಾರ ಕಾರ್ಡ್‌ನಲ್ಲಿ 19 ವರ್ಷವಾಗಿರುವ ಮಾಹಿತಿ ಇದ್ದಿದ್ದರಿಂದ ಪಾಲಕರು ಅದನ್ನೇ ಮುಂದಿಟ್ಟುಕೊಂಡು ಮದುವೆ ಸಿದ್ಧತೆ ಮಾಡಿಕೊಂಡಿದ್ದರು. ಇದೆಲ್ಲವೂ ಗೊತ್ತಿದ್ದರೂ ಬಾಲ್ಯ ಎನ್ನುವುದನ್ನು ಮುಚ್ಚಿಡಲು ಬಂದವರಿಗೆಲ್ಲ ಬಾಲಕಿಯ ಆಧಾರ್ ಕಾರ್ಡ್ ತೋರಿಸುತ್ತಿದ್ದರು.
ಇನ್ನೇನು ಮದುವೆ ನಡೆದು ಹೋಗಬೇಕು. ಆದರೆ, ಈ ಕುರಿತು ವಿವಾಹವಾಗುತ್ತಿರುವುದು ಯುವತಿಯೇ ಅಲ್ಲ, ಆಕೆ ಬಾಲಕಿ ಎನ್ನುವ ಮಾಹಿತಿ 1098ಗೆ ಕರೆ ಮಾಡಿ ಯಾರೋ ಪುಣ್ಯಾತ್ಮರು ಮಾಹಿತಿ ನೀಡಿದರು.ಇದನ್ನು ಬೆನ್ನು ಹತ್ತಿದ ಮಕ್ಕಳ ರಕ್ಷಣಾ ಘಟಕ ಮತ್ತು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೊಡ್ಡ ಸವಾಲು ಎನ್ನುವಂತಾಯಿತು. ಆದರೆ ಮಾಹಿತಿ ನೀಡಿದವರ ಮೇಲೆ ಖಚಿತ ನಂಬಿಕೆ ಇದ್ದಿದ್ದರಿಂದ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯಲ್ಲಿ 19 ವರ್ಷ ಆಗಿದ್ದರೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ನಂಬಲಿಲ್ಲ. ಬದಲಾಗಿ ಶಾಲಾ ದಾಖಲಾತಿ ಪರಿಶೀಲನೆ ಮಾಡಲು ಮುಂದಾದರು. ಬಾಲಕಿಯ ವಯೋಮಿತಿ ಖಾತ್ರಿಪಡಿಸಿಕೊಳ್ಳಲು ಪ್ರಥಮವಾಗಿ ಜನನ ಪ್ರಮಾಣಪತ್ರ ಬೇಕು, ಎರಡನೆಯದಾಗಿ ಶಾಲಾ ದೃಢೀಕರಣ ಬೇಕು, ಒಂದು ವೇಳೆ ಮಗು ಶಾಲೆ ಕಲಿತಿಲ್ಲ ಅಂದಾಗ ಆ ವ್ಯಾಪ್ತಿಯ ಮುಖ್ಯೋಪಾಧ್ಯಾಯರಿಂದ ಮಗು ಶಾಲೆ ಕಲಿತಿಲ್ಲ ಎಂದು ದೃಢೀಕೃತ ಪತ್ರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಬೇಕು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ವೈದ್ಯಕೀಯ ತಪಾಸಣೆಗಾಗಿ ಪತ್ರ ನೀಡುತ್ತಾರೆ. ಇದರಿಂದ ವೈದಕೀಯ ತಪಾಸಣೆ ಮಾಡಿ, ಮೆಡಿಕಲ್ ಸರ್ಟಿಫಿಕೆಟ್ ತೆಗೆದುಕೊಳ್ಳಬೇಕು. ಈ ಮೂರನ್ನು ಹೊರತುಪಡಿಸಿ ಬೇರೆ ಯಾವುದೇ ದಾಖಲೆ ವಿವಾಹಕ್ಕೆ ನಡೆಯುವುದಿಲ್ಲ ಎಂದು ಕುಟುಂಬಸ್ಥರಿಗೆ ಅರಿವು ಮೂಡಿಸಿದ್ದಾರೆ.
ವಯಸ್ಸನ್ನು ಖಾತ್ರಿಪಡಿಸಿಕೊಂಡು ಬಾಲಕಿಯನ್ನು ರಕ್ಷಣೆ ಮಾಡಬೇಕೆನ್ನುವಷ್ಟರಲ್ಲಿ ಮಧ್ಯರಾತ್ರಿ 12 ಗಂಟೆಗೆ ಕುಟುಂಬಸ್ಥರು ಗಾಬರಿಯಾಗಿ ಮಗುವನ್ನು ಬೇರೆ ಕಡೆ ಕಳುಹಿಸಿದ್ದಾರೆ. ಇದನ್ನು ಗಮನಿಸಿದ್ದ ಮಕ್ಕಳ ರಕ್ಷಣಾ ತಂಡ ಕುಟುಂಬದವರಿಗೆ ಬಾಲಕಿಯನ್ನು ಕೂಡಲೇ ಒಪ್ಪಿಸಿ, ಇಲ್ಲದಿದ್ದರೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಚ್ಚರಿಸಿದ್ದಾರೆ. ಆಗ ಬಾಲಕಿಯನ್ನು ಕುಟುಂಬಸ್ಥರು ಒಪ್ಪಿಸಿದ್ದಾರೆ. ಬಾಲಕಿಯನ್ನು ಬಾಲಮಂದಿರದಲ್ಲಿರಿಸಲಾಗಿದೆ. ಬೆಳಗಾಗಿದ್ದರೆ ಬಾಲ್ಯವಿವಾಹವೊಂದು ನಡೆದು ಹೋಗಬೇಕಾಗಿದ್ದನ್ನು ಮಕ್ಕಳ ರಕ್ಷಣಾ ಘಟಕದವರು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಯೋ ಲೆಕ್ಕಾಚಾರಕ್ಕಲ್ಲ ಆಧಾರ್ ಕಾರ್ಡ್: ಆಧಾರ್ ಕಾರ್ಡ್ ಆಧಾರದಲ್ಲಿ ವಯಸ್ಸಿನ ಲೆಕ್ಕಾಚಾರ ಮಾಡುವುದು ಅಧಿಕೃತ ಅಲ್ಲವೇ ಅಲ್ಲ. ಜನ್ಮ ಪ್ರಮಾಣ ಪತ್ರ, ಶಾಲಾ ದೃಢೀಕರಣ ಕಡ್ಡಾಯ. ಇವೆರಡು ಇರದಿದ್ದರೆ ವೈದ್ಯಕೀಯ ತಪಾಸಣೆ ಮಾಡಬೇಕು. ಆಧಾರ್ ಕಾರ್ಡ್ ಆಧಾರದಲ್ಲಿ ಮದುವೆ ವಯಸ್ಸು ನಿರ್ಧರಿಸುವಂತೆಯೇ ಇಲ್ಲ.