ಬಾಲ್ಯ ವಿವಾಹದಿಂದ ಬದುಕು ಘೋರ

KannadaprabhaNewsNetwork | Updated : Jul 12 2024, 12:47 PM IST

ಸಾರಾಂಶ

ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬಾಲ್ಯವಿವಾಹಗಳ ಸಂಖ್ಯೆ ಸಹಜವಾಗಿ ಹೆಚ್ಚಿದ್ದು ಈ ನಿಟ್ಟಿನಲ್ಲಿ ಕೂಲಿ ಕಾರ್ಮಿಕರಿಗೆ ಬಾಲ್ಯವಿವಾಹದ ಅಪಾಯದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ 

 ಸಕಲೇಶಪುರ :  ಅಪ್ರಾಪ್ತ ವಯಸ್ಸಿನ ಮದುವೆ ಅಪಾಯಗಳ ಸೃಷ್ಟಿಗೆ ಕಾರಣವಾಗಿದ್ದು, ಬಾಲ್ಯವಿವಾಹದ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿದಾಗ ಬಾಲ್ಯವಿವಾಹ ನಿರ್ಮೂಲನೆ ಸಾಧ್ಯ ಎಂದು ಮಕ್ಕಳ ರಕ್ಷಣಾಧಿಕಾರಿ ಕಾಂತರಾಜು ಹೇಳಿದರು.

ಗುರುವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ರಕ್ಷಣೆಗಾಗಿ ನಾವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟಿಸಿ ಮಾತನಾಡಿ, ಬಾಲ್ಯವಿವಾಹದ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಅರಿವು ಹೊಂದಬೇಕು. ದೈಹಿಕ, ಮಾನಸಿಕ ಪ್ರಬುದ್ಧತೆ ಮತ್ತು ಸ್ವಯಂ ನಿರ್ಧಾರ ತೆಗೆದುಕೊಳ್ಳುವ ವಯಸ್ಸು ಬರುವವರೆಗೆ ಮಕ್ಕಳಿಗೆ ಮದುವೆ ಮಾಡುವುದನ್ನು ಪಾಲಕರು ನಿಲ್ಲಿಸಬೇಕು ಎಂದರು.

ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬಾಲ್ಯವಿವಾಹಗಳ ಸಂಖ್ಯೆ ಸಹಜವಾಗಿ ಹೆಚ್ಚಿದ್ದು ಈ ನಿಟ್ಟಿನಲ್ಲಿ ಕೂಲಿ ಕಾರ್ಮಿಕರಿಗೆ ಬಾಲ್ಯವಿವಾಹದ ಅಪಾಯದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಬಾಲ್ಯ ವಿವಾಹದಿಂದ ಬದುಕು ಘೋರ ಎಂಬುದನ್ನು ಎಲ್ಲರೂ ಅರಿತು ಆರೋಗ್ಯವಂತ ಸಮಾಜ ನಿರ್ಮಾಣಗೊಳ್ಳಲು ಸಹಕರಿಸಬೇಕು ಎಂದರು. 

ಬಾಲ್ಯ ವಿವಾಹವಾಗದಂತೆ ಎಚ್ಚರ ವಹಿಸುವುದು ಬಹುಮುಖ್ಯವಾಗಿ ಸಾರ್ವಜನಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಜನರು ಸಹಕರಿಸಿದರೆ ಬಾಲ್ಯವಿವಾಹ ತಡೆಗಟ್ಟಬಹುದು ಎಂದರು. ಇದಲ್ಲದೆ ವಿದ್ಯಾರ್ಥಿಯರು ಹಾಗೂ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯವಾಗದಂತೆ ಎಚ್ಚರದಿಂದ ಇರಬೇಕು ಹಾಗೂ ದೌರ್ಜನ್ಯ ಎಸಗುವವರ ಮೇಲೆ ದೂರು ನೀಡುವುದಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ಗೆ ಕರೆ ಮಾಡಬಹುದಾಗಿದೆ ಎಂದರು.

ಈ ಸಂರ್ಧರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮೇಲ್ವಿಚಾರಕಿ ಉಮಾಶ್ರೀ, ಪ್ರಾಂಶುಪಾಲ ದೇವರಾಜು, ಉಪನ್ಯಾಸಕರಾದ ಶ್ರೀನಿವಾಸ್, ತಾರಾ, ಶ್ವೇತ, ರಮ್ಯಾ ಹಾಜರಿದ್ದರು. 

Share this article