ವಿದ್ಯುತ್ ಸಮಸ್ಯೆಯ ದೂರು ಬಂದಲ್ಲಿ ತ್ವರಿತ ಸ್ಪಂದಿಸಿ; ಸಚಿವ ಜಾರ್ಜ್ ತಾಕೀತು

KannadaprabhaNewsNetwork |  
Published : Jul 12, 2024, 01:40 AM IST
ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಗುರುವಾರ  ಜಿಲ್ಲೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಗುರುವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಇಲಾಖೆಯ ಸಮಸ್ಯೆಗಳನ್ನು ಆಲಿಸಿದರು.  | Kannada Prabha

ಸಾರಾಂಶ

ಮಳೆಗಾಲ, ಗಾಳಿ ಇತ್ಯಾದಿ ಸಂದರ್ಭಗಳಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದಲ್ಲಿ, ಲೈನ್‍ಗಳ ನಿರ್ವಹಣೆ, ದುರಸ್ತಿ ಕಾರ್ಯ ಮತ್ತು ಇನ್ನಿತರೆ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು

ಬಳ್ಳಾರಿ: ಗ್ರಾಮ ಹಾಗೂ ಕೃಷಿ ಪ್ರದೇಶಗಳಲ್ಲಿ ವಿದ್ಯುತ್‍ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ, ದೂರು ಬಂದಲ್ಲಿ ಕೂಡಲೇ ಸ್ಪಂದಿಸಿ, ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಗುರುವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಗಾಲ, ಗಾಳಿ ಇತ್ಯಾದಿ ಸಂದರ್ಭಗಳಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದಲ್ಲಿ, ಲೈನ್‍ಗಳ ನಿರ್ವಹಣೆ, ದುರಸ್ತಿ ಕಾರ್ಯ ಮತ್ತು ಇನ್ನಿತರೆ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರದೇ ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಕಂಪ್ಲಿ, ಕುರುಗೋಡು ತಾಲೂಕು ವ್ಯಾಪ್ತಿ ಹಳೆಯ ವಿದ್ಯುತ್ ಲೈನ್‍ ಇವೆ. ಜೆಸ್ಕಾಂ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಕುರುಗೋಡು ಭಾಗದ ಬಹುವರ್ಷದ ಕೋಳೂರು ಏತ ನೀರಾವರಿ ಯೋಜನೆಯು, 20 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸುವ ಯೋಜನೆಯಾಗಿದ್ದು, ಕೇವಲ ವಿದ್ಯುತ್ ಸರಬರಾಜಿಲ್ಲದೇ ಸ್ಥಗಿತಗೊಂಡಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ್ ಚೌವ್ಹಾಣ್, ಸ್ಥಳ ಪರಿಶೀಲಿಸಿ ವರದಿ ನೀಡುತ್ತೇನೆ ಎಂದರು.

ಬಳಿಕ ಮಧ್ಯಪ್ರವೇಶಿಸಿದ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್, ಜೆಸ್ಕಾಂ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ, ಆಯಾ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಈ ಕುರಿತಾಗಿ ಸಭೆ ನಡೆಸಬೇಕು. ಅಧಿಕಾರಿಗಳು, ಶಾಸಕರೊಂದಿಗೆ ಸಹ ಸಂಪರ್ಕ ಸಾಧಿಸಬೇಕು ಎಂದು ತಿಳಿಸಿದರು.

ಬುಕ್ಕಸಾಗರ ಗ್ರಾಮದ ಬಹು ಕುಡಿಯುವ ನೀರಿನ ಯೋಜನೆಯು ಆ ವ್ಯಾಪ್ತಿಯ 10 ಗ್ರಾಪಂಗಳ ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆಯಾಗಿದೆ. ಇದು ಕೂಡ ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿಯೇ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ಶಾಸಕ ಜೆ.ಎನ್.ಗಣೇಶ್ ಸಭೆಗೆ ತಿಳಿಸಿದರು.

ಈ ವೇಳೆ ಸಚಿವರು ಮಾತನಾಡಿ, ವಿದ್ಯುತ್ ಸರಬರಾಜು ಸಂಬಂಧಿಸಿದಂತೆ ಕಾಮಗಾರಿಗಳ ಡಿಪಿಆರ್ ಸಿದ್ಧಪಡಿಸಿ, ಕೂಡಲೇ ಅನುಮೋದನೆ ಪಡೆಯಬೇಕು. ಮಳೆಗಾಲ ಆರಂಭ ಸಮಯದ ಹಿನ್ನಲೆಯಲ್ಲಿ ಬಾಕಿ ಉಳಿದ ಮತ್ತು ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸವಾಗಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಳೆದ 6-7 ತಿಂಗಳಲ್ಲಿ ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಸಂಬಂಧಿಸಿದಂತೆ ಸಾವು ಪ್ರಕರಣಗಳು ವರದಿಯಾಗಿವೆ. ಕುಟುಂಬಗಳಿಗೆ ಪರಿಹಾರ ಹಣವು ತಲುಪಿಲ್ಲ ಎಂದು ಮೃತರ ಕುಟುಂಬದವರು ಗಮನಕ್ಕೆ ತಂದಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇದಕ್ಕೆ ಸಚಿವರು, ಜಿಲ್ಲೆಯಲ್ಲಿ ವಿದ್ಯುತ್‍ಗೆ ಸಂಬಂಧಿಸಿದಂತೆ ಸಾವು ಪ್ರಕರಣ ಮೃತರ ಕುಟುಂಬಕ್ಕೆ ಕಾನೂನಾತ್ಮಕವಾಗಿ ಪರಿಹಾರ ನೀಡಲು ಮುತುವರ್ಜಿ ವಹಿಸಬೇಕು ಎಂದರು.

ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಮಾತನಾಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಡಿಸಿ ಪ್ರಶಾಂತಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ