ಅಕ್ಷಯತೃತೀಯದಲ್ಲಿ ಬಾಲ್ಯ ವಿವಾಹ ಹೆಚ್ಚು: ಎಚ್ಚರಿಕೆ

KannadaprabhaNewsNetwork | Published : Apr 13, 2025 2:01 AM

ಸಾರಾಂಶ

ಬಾಲ್ಯ ವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಿ , ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ)ಅದಿನಿಯಮ 2016 ರ ಪ್ರಕಾರ ಈ ಮದುವೆಯನ್ನು ನಿಷೇಧಿಸಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಾಲ್ಯ ವಿವಾಹವು ಅನಾದಿಕಾಲದಿಂದ ನಡೆದುಕೊಂಡು ಬಂದ ಅನಿಷ್ಟ ಪದ್ಧತಿಯಾಗಿದ್ದು ಇದು 21ನೇ ಶತಮಾನದಲ್ಲೂ ಆಚರಣೆಯಲ್ಲಿರುವುದು ಶೋಚನೀಯ ಸಂಗತಿ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎನ್. ಮುನಿನಾರಾಯಣಸ್ವಾಮಿ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಂಧ್ರದ ಗಡಿಭಾಗದ ಜಿಲ್ಲೆಯ ತಾಲ್ಲೂಕುಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗುತ್ತಿವೆ. ಏಪ್ರಿಲ್ 30 ರಂದು ಅಕ್ಷಯ ತೃತೀಯ ದಿನದಂದು ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ನಡೆಯುವ ಸಾಧ್ಯತೆ ಇದೆ. ಅಂದು ಎಲ್ಲ ಬಾಲ್ಯ ವಿವಾಹ ನಿಷೇದಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಿದರು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ

ಬಾಲ್ಯ ವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಿ , ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ)ಅದಿನಿಯಮ 2016 ರ ಪ್ರಕಾರ ಈ ಮದುವೆಯನ್ನು ನಿಷೇಧಿಸಲಾಗಿದ್ದು, ಇದನ್ನು ಶಿಕ್ಷಾರ್ಹ ಅಫರಾಧ ಎಂದು ಪರಿಣಿಸಲಾಗುವುದು ಎಂದರು.

ಭಾಲ್ಯ ವಿವಾಹ ಏರ್ಪಡಿಸುವ ಪೋಷಕರು ಅಥವಾ ಪಾಲಕರು,18 ವರ್ಷದೊಳಗಿನ ಹುಡುಗಿಯನ್ನು ಮದುವೆಯಾಗುವ ವಯಸ್ಕ ವ್ಯಕ್ತಿ ಮತ್ತು ಮದುವೆಯಲ್ಲಿ ಭಾಗವಹಿಸುವ ಎಲ್ಲಾ ರೀತಿಯಲ್ಲೂ ಸಹಕರಿಸಿದ ಕುಟುಂಬಸ್ಥರನ್ನು ಸಹ ತಪ್ಪಿತಸ್ಥರು ಎಂದು ಇವರುಗಳಿಗೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಪ್ರಕಾರ 1 ವರ್ಷಕ್ಕೆ ಕಡಿಮೆಯಿಲ್ಲದೆ ಗರಿಷ್ಠ 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಅಥವಾ 1ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿರುತ್ತದೆ ಎಂದರು.ಸ್ವಯಂಪ್ರೇರಿತ ದೂರು ದಾಖಲು

ಈ ಕಾಯ್ದೆಯಡಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಲು ಅವಕಾಶವಿರುತ್ತದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಹಾಗೂ ತಾಲ್ಲೂಕು ಹಂತದಲ್ಲಿ ಬಾಲ್ಯ ವಿವಾಹ ತಡೆ ಸಮಿತಿಗಳು ಇನ್ನಷ್ಟು ಕ್ರಿಯಾಶೀಲರಾಗಿ ಪ್ರಕರಣಗಳು ಜರುಗದಂತೆ ತಡೆಗಟ್ಟಬೇಕು. ಅದೇ ರೀತಿ ಇದು ಕೇವಲ ಸರ್ಕಾರ ಅಧಿಕಾರಿಗಳ ಜವಾಬ್ದಾರಿ ಆಗದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆ ಎಂದರು.

ಬಾಲ್ಯವಿವಾಹ ತಡೆಗಟ್ಟಿಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಕಲ್ಯಾಣ ಮಂಟಪಗಳಲ್ಲಿ ಸಾಮೂಹಿಕ ಅಥವಾ ವೈಯಕ್ತಿಕ ವಿವಾಹದಲ್ಲಿ ಯಾವುದೇ ಬಾಲ್ಯ ವಿವಾಹಗಳು ನಡೆಯದಂತೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ 1098, ಪೋಲಿಸ್ ಸಹಾಯವಾಣಿ 112, ಮತ್ತು ಮಕ್ಕಳ ರಕ್ಷಣಾ ಘಟಕ 08156-277113 ಹಾಗೂ ಸಂಬಂಧಪಟ್ಟ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಬಹುದು ಎಂದು ತಿಳಿಸಿದರು.

Share this article