ಕನ್ನಡ ಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಮಂಚನಹಳ್ಳಿ ಗ್ರಾಮದ ಗಿರೀಶ್- ಅಶ್ವಿನಿ ಎಂಬುವವರ ಮಗು ಮೃತಪಟ್ಟಿದ್ದು, ಅಶ್ವಿನಿ ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದು, ಕರ್ತವ್ಯದಲ್ಲಿದ್ದ ಡಾ.ರೇಣುಕಾ ದೇವಿ ತಪಾಸಣೆ ನಡೆಸಿದ್ದರು ಎನ್ನಲಾಗಿದೆ.
ಮಗುವಿನ ತೂಕ ಹೆಚ್ಚಿದ್ದ ಕಾರಣ ಶಸ್ತ್ರಚಿಕಿತ್ಸೆ ಮಾಡಿ ಮಗು ಹೊರ ತೆಗೆಯುವಂತೆ ಪೋಷಕರು ವೈದ್ಯರಿಗೆ ಮನವಿ ಮಾಡಿದ್ದರೂ ಡಾ.ರೇಣುಕಾ ದೇವಿ ಅವರು ನಾರ್ಮಲ್ ಹೆರಿಗೆಯಾಗಲಿದೆ ಎಂದು ಭರವಸೆ ನೀಡಿದ್ದರು. ಶಸ್ತ್ರಚಿಕಿತ್ಸೆಗಾಗಿ ಸಿಬ್ಬಂದಿ ಹಣಕ್ಕಾಗಿ ಒತ್ತಾಯಿಸಿದ್ದರು ಎನ್ನಲಾಗಿದೆ.ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡು ಹೆರಿಗೆಯಾಗಿದ್ದು, ವೈದ್ಯರ ವಿಳಂಬ ಕಾರಣದಿಂದ ಮಗು ಮೃತಪಟ್ಟಿದೆ. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನಮಗೆ ನ್ಯಾಯ ಸಿಗಬೇಕು ಎಂದು ಮಗುವಿನ ತಂದೆ ಗಿರೀಶ್ ಅಳಲು ವ್ಯಕ್ತಪಡಿಸಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಪ್ರಕರಣ ಸಂಬಂಧ ವೈದ್ಯರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದೇನೆ, ಕರ್ತವ್ಯ ಲೋಪವೆಸಗಿರುವ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಲಂಚ ಕೇಳಿದ ಹಾಗೂ ಪಡೆದ ದಾಖಲೆಗಳನ್ನು ಕೊಟ್ಟರೆ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಶಿಶು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.