ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ

KannadaprabhaNewsNetwork |  
Published : Jun 27, 2024, 01:00 AM IST
7 ಆರೋಪಿಗಳ ಬಂಧನ | Kannada Prabha

ಸಾರಾಂಶ

ಅಕ್ರಮ ಸಂಬಂಧದಿಂದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆಹಚ್ಚಿ ಅವರು ಜನ್ಮನೀಡುವ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಗುಬ್ಬಿ ಪೊಲೀಸರು ಬೇಧಿಸಿ 7 ಆರೋಪಿಗಳನ್ನು ಬಂಧಿಸಿ, 5 ಮಕ್ಕಳನ್ನು ರಕ್ಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಅಕ್ರಮ ಸಂಬಂಧದಿಂದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆಹಚ್ಚಿ ಅವರು ಜನ್ಮನೀಡುವ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಗುಬ್ಬಿ ಪೊಲೀಸರು ಬೇಧಿಸಿ 7 ಆರೋಪಿಗಳನ್ನು ಬಂಧಿಸಿ, 5 ಮಕ್ಕಳನ್ನು ರಕ್ಷಿಸಿದ್ದಾರೆ. ಸದ್ಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ತುಮಕೂರಿನ ಅಶೋಕ ನಗರದ 2ನೇ ಕ್ರಾಸ್ ನಿವಾಸಿ ಮಹೇಶ್ ಯು.ಡಿ. (39), ಹುಳಿಯಾರಿನ ನಿವಾಸಿ ಫಾರ್ಮಸಿಸ್ಟ್ ಮೆಹಬೂಬ್ ಷರೀಫ್ (52), ಜಾತ್ರೆಗಳಲ್ಲಿ ಟ್ಯಾಟೂ ಬರೆಯುತ್ತಿದ್ದ ಗುಬ್ಬಿ ತಾಲೂಕಿನ ಬಿಕ್ಕೇಗುಡ್ಡ ಗ್ರಾಮದ ಕೆ.ಎನ್.ರಾಮಕೃಷ್ಣ (53), ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು (45), ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರಿನ ಮುಬಾರಕ್ ಪಾಷ (44), ಮಧುಗಿರಿ ತಾಲೂಕು ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಆಗಿದ್ದ ಪೂರ್ಣಿಮಾ ಎನ್ (39) ಹಾಗೂ ಶಿರಾ ಜ್ಯೋತಿನಗರ ನಿವಾಸಿ ಹಂಗಾಮಿ ನರ್ಸ್ ಸೌಜನ್ಯ (48) ಎಂಬುವರು ಬಂಧಿತರು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, 50 ಸಾವಿರ ರು. ನಗದು, 4 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮಾತನಾಡಿ, ಸದರಿ ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ ಬಳಿಕ ಬೆಳ್ಳೂರು ಕ್ರಾಸ್‌ನಲ್ಲಿ ರಾಕಿ (11 ತಿಂಗಳು), ಹುಳಿಯಾರು ಬಳಿ ಟಿ.ವಿ. ಭಕ್ತಿ (1 ತಿಂಗಳು), ಹಾಸನ ಜಿಲ್ಲೆ ಸಾಣೆಹಳ್ಳಿ ಬಳಿ ಕೃತಿ (1 ತಿಂಗಳು), ಬೆಂಗಳೂರಿನ ಸಿಂಗಾಪುರ ಲೇಔಟ್‌ನಲ್ಲಿದ್ದ ವರ್ಷಿತ್ ಕಿಶನ್ ಆಚಾರ್ಯ (2ತಿಂಗಳು) ಹಾಗೂ ಮಧುಗಿರಿ ತಾಲೂಕು ಎಸ್.ಎಂ. ಗೊಲ್ಲಹಳ್ಳಿಯಲ್ಲಿ ಮೈಥಿಲಿ (1 ತಿಂಗಳು) ಎಂಬ ಮಕ್ಕಳನ್ನು ಪತ್ತೆ ಮಾಡಿ ಸಂರಕ್ಷಿಸಿದ್ದು, ಈ ಪೈಕಿ ಒಂದು ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಉಳಿದ 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.

ಇದೇ ಜೂನ್ 6 ರಂದು ರಾತ್ರಿ ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಾಲಯದ ಬಳಿ ಮಹಾದೇವಿ ಎಂಬುವರು ತನ್ನ ಕುಟುಂಬದೊಂದಿಗೆ ಮಲಗಿದ್ದಾಗ ಇವರ 11 ತಿಂಗಳ ರಾಕಿ ಎಂಬ ಗಂಡು ಮಗುವನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದರು. ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣವನ್ನು ಪತ್ತೆ ಹಚ್ಚಲು ಎಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್, ಶಿರಾ ಉಪವಿಭಾಗದ ಡಿವೈಎಸ್ಪಿ ಬಿ.ಕೆ.ಶೇಖರ್, ಗುಬ್ಬಿ ಸಿಪಿಐ ಗೋಪಿನಾಥ್, ಪಿಎಸ್‌ಐ ಸುನೀಲ್‌ಕುಮಾರ್ ಹಾಗೂ ಸಿಬ್ಬಂದಿ ನವೀನ್‌ಕುಮಾರ್ ವಿಜಯಕುಮಾರ್, ಮಧುಸೂಧನ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ದುಶ್ಯಂತ್ ರವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಮಗುವನ್ನು ಕಳ್ಳತನ ಮಾಡಿದ್ದ ಗುಬ್ಬಿ ತಾಲೂಕು ಬಿಕ್ಕೇಗುಡ್ಡ ನಿವಾಸಿ ರಾಮಕೃಷ್ಣ ಹಾಗೂ ತುಮಕೂರಿನ ಭಾರತಿ ನಗರದ ವಾಸಿ ಹನುಮಂತರಾಜು ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ನೀಡಿದ ಮಾಹಿತಿ ಮೇರೆಗೆ ಆರೋಪಿ ಮಹೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 1.75 ಲಕ್ಷ ರು.ಗಳಿಗೆ ಮಗುವನ್ನು ಬೆಳ್ಳೂರು ಕ್ರಾಸ್ ಮುಬಾರಕ್ ಎಂಬುವರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿತು ಎಂದು ವಿವರಿಸಿದರು.ಆರೋಪಿಗಳು ಮಕ್ಕಳನ್ನು 2 ರಿಂದ 3 ಲಕ್ಷ ರು. ವರೆಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಸದರಿ ಆರೋಪಿಗಳಿಂದ ಮಕ್ಕಳನ್ನು ಹಣ ಕೊಟ್ಟು ಖರೀದಿಸಿರುವವರನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿರುವ ಬಂಧಿತ ಆರೋಪಿ ಮೆಹಬೂಬ್ ಷರೀಫ್ ತನ್ನ ಪತ್ನಿಯ ಹೆಸರಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ವಿ. ಮರಿಯಪ್ಪ, ಡಿವೈಎಸ್ಪಿಗಳಾದ ರಾಮಚಂದ್ರ, ಬಿ.ಕೆ. ಶೇಖರ್, ಚಂದ್ರಶೇಖರ್ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ