ಕೊಪ್ಪ: ಸಂತೆಯ ನೈಜತೆಯನ್ನು ವಿದ್ಯಾರ್ಥಿಗಳು ಮರುಸೃಷ್ಟಿಗೊಳಿಸಿದ್ದಾರೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಲ್.ಅಂಜನಪ್ಪ ಹೇಳಿದರು.
ಮಂಗಳವಾರ ಪಟ್ಟಣದ ಪುರಸಭೆ ಭವನದಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಕಾರ್ಯಕ್ರಮದಡಿ ಕೆಪಿಎಸ್ ಪ್ರೌಢಶಾಲಾ ವಿಭಾಗದ ಮಕ್ಕಳಿಗಾಗಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿದೆಸೆಯಿಂದಲೇ ವೃತ್ತಿ ಕೌಶಲ್ಯವನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಹಾಗೂ ಗಣಿತ ಮತ್ತು ವಿಜ್ಞಾನಗಳ ಅರಿವನ್ನು ಪ್ರಾತ್ಯಕ್ಷಿಕೆಯಾಗಿ ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಮಾಜಕ್ಕೆ ಮಾರಕವಾಗದ ರೀತಿಯಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ಉದ್ಯೋಗ ವ್ಯಾಪಾರ ಮಾಡುವ ಕೌಶಲ್ಯತೆ ಇದರಿಂದ ಲಭಿಸಲಿದೆ. ಸಂತೆಯ ನೈಜತೆಯನ್ನು ತಂದುಕೊಟ್ಟ ವಿದ್ಯಾರ್ಥಿಗಳು ಗ್ಯಾಸ್ ಸಿಲಿಂಡರ್ ಬಳಕೆಯ ಸಂದರ್ಭದಲ್ಲಿ ಅಗ್ನಿ ಅವಘಡಗಳು ಉಂಟಾದಾಗ ದುರಂತವನ್ನು ತಪ್ಪಿಸಲು ಈ ಸಂದರ್ಭದಲ್ಲಿ ಅಲರಾಂ ಕೂಗುವ ತಾವೇ ತಯಾರಿಸಿದ ವೈಜ್ಞಾನಿಕ ಪರಿಕಲ್ಪನೆಯನ್ನು ಇಲ್ಲಿ ಪ್ರದರ್ಶನ ಮಾಡಿದ್ದಾರೆ. ಅತೀ ಹೆಚ್ಚು ಬೇಡಿಕೆಯುಳ್ಳ ಬ್ಯೂಟಿಪಾರ್ಲರ್‌ಗೆ ಅನುವಾಗುವಂತೆ ಪ್ರಸಾದನ ಕಲೆಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮೂಡಿಸಲಾಗಿದೆ. ಇದೊಂದು ಉತ್ತಮ ಕಾರ್ಯಕ್ರಮ ಎಂದರು.ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಮಾತನಾಡಿ, ಬದುಕಿನ ಲೆಕ್ಕಾಚಾರದೊಂದಿಗೆ ಗಣಿತ ವಿಜ್ಞಾನವನ್ನು ಇಷ್ಟಪಟ್ಟು ಕಲಿಯುವಂತೆ ಮಕ್ಕಳನ್ನು ಓಲೈಸಲು ಮಕ್ಕಳ ಸಂತೆ ಉಪಯೋಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮಾಡುತ್ತಿರಬೇಕು ಎಂದು ಕಾರ್ಯಕ್ರಮದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳಾದ ಮಿಕ್ಸಿ, ಫ್ಯಾನ್, ರಿಪೇರಿಯ ಬಗ್ಗೆ, ಬ್ಯೂಟಿಪಾರ್ಲರ್ ಪ್ರಸಾದನ ಬಗ್ಗೆ, ಸೇರಿದಂತೆ ಹಲವಾರುವಿಚಾರಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ನೂರಾರು ವಿದ್ಯಾರ್ಥಿಗಳು ತರಕಾರಿ, ಸೊಪ್ಪು, ತಂಪು ಪಾನೀಯ, ಪಾನಿಪೂರಿ, ಮಸಾಲೆ ಪುರಿ ಸೇರಿದಂತೆ ವಿವಿಧ ಬಗ್ಗೆಯ ವಸ್ತುಗಳ ಮಾರಾಟ ನಡೆಸಿದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಜೀನತ್, ಸದಸ್ಯ ಉಮೇಶ್, ಪ್ರಕಾಶ್, ಮೈತ್ರಿ, ಕೆಪಿಎಸ್ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ಕಮಲ್ ಬಾಬು, ಉಪಪ್ರಾಂಶುಪಾಲೆ ಯಶೋಧ ಆರ್.ಒ, ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.