ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿ, ಸತ್ಪ್ರಜೆಯನ್ನಾಗಿಸುವುದೇ ಸವಾಲಿನ ಕೆಲಸವಾಗಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿ, ಸತ್ಪ್ರಜೆಯನ್ನಾಗಿಸುವುದೇ ಸವಾಲಿನ ಕೆಲಸವಾಗಿದೆ. ಸತ್ಪ್ರಜೆಯಾದಾಗ ದೇಶದ ಹಿತ, ಚಿಂತನೆ ಅವರಿಗೆ ಅರ್ಥವಾಗುತ್ತದೆ. ಮನೆಗಳಲ್ಲಿ ಸರಿಯಾದ ಸಂಸ್ಕಾರಗಳೇ ಲಭಿಸುತ್ತಿಲ್ಲ. ಪಾಲಕರು ಅರ್ಥ ವ್ಯವಸ್ಥೆ ಕುರಿತೇ ಹೆಚ್ಚು ಯೋಚನೆ ಮಾಡುವ ಕಾಲಘಟ್ಟ ಪ್ರಾರಂಭಗೊಂಡಿದೆ. ಅರ್ಥವ್ಯವಸ್ಥೆ ಅಗತ್ಯವಾದರೂ ಮಕ್ಕಳನ್ನು ಸರಿದಾರಿಗೆ ಒಯ್ಯುವ ಚಿಂತನೆ ಮಾಡದಿದ್ದರೆ ಭವಿಷ್ಯದಲ್ಲಿ ಪಾಲಕರು ತೊಂದರೆಗೀಡಾಗಬೇಕಾಗುತ್ತದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಹೇಳಿದರು.
ಶನಿವಾರ ಪಟ್ಟಣದ ಮಾದರಿ ಶಾಲೆಯ ಸಭಾಭವನದಲ್ಲಿ ರಂಗ ಸಹ್ಯಾದ್ರಿ, ಓಂಕಾರ ಯೋಗ ಕೇಂದ್ರ, ಕಸಾಪ, ಯಲ್ಲಾಪುರ ಪತ್ರಿಕಾ ಬಳಗದ ಆಶ್ರಯದಲ್ಲಿ ೨೫ ದಿನಗಳ ಕಾಲ ನಡೆಯುವ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಅನಿವಾರ್ಯ. ಅದೊಂದೇ ಸಾಲದು. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬದುಕಿಗೆ ಬೇಕಾದ ಸಂಸ್ಕಾರಯುತ ಶಿಕ್ಷಣ, ಬದುಕಿನ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಆದ್ದರಿಂದ ಎಲ್ಲೆಡೆ ಇಂತಹ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲೂ ರಂಗಸಹ್ಯಾದ್ರಿಯಿಂದ ನಾವು ಕಳೆದ ೨೦ ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದೇವೆ. ಪಾಲಕರನ್ನು, ಗುರುಹಿರಿಯರನ್ನು ಗೌರವಿಸುವ ಮನೋಭಾವ ಇಲ್ಲವಾಗುತ್ತಿದೆ. ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಹೀಗೇ ಮುಂದುವರೆದರೆ ಬದುಕು ದುಃಸ್ಥರವಾದೀತು. ಪಾಲಕರು ಅರ್ಥಮಾಡಿಕೊಳ್ಳಬೇಕು. ಕೇವಲ ಹಣ ಸಂಪಾದನೆಯೇ ಸರ್ವಸ್ವವಲ್ಲ. ಶಿಕ್ಷಣದ ಜೊತೆ ಸಂಸ್ಕಾರಕ್ಕೆ ಮಹತ್ವ ನೀಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್. ಗಾಂವ್ಕರ, ನಂದೊಳ್ಳಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ತಿಮ್ಮಣ್ಣ ಭಾಗ್ವತ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.