ಮಕ್ಕಳಿಗೆ ಮೊಟ್ಟೆ ಬದಲು ಹಾಲು ನೀಡಲು ಒತ್ತಾಯ

KannadaprabhaNewsNetwork | Published : Nov 1, 2024 12:14 AM

ಸಾರಾಂಶ

ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ಎಸಿ ಕಚೇರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಯ ಬದಲು ಈ ಹಿಂದಿನಂತೆ ಹಾಲು ಕೊಡಬೇಕೆಂದು ಒತ್ತಾಯಿಸಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸಾಗರ ಶಾಖೆ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಹಾಸಭಾ ಅಧ್ಯಕ್ಷ ಕೆ.ವಿ.ಪ್ರವೀಣ್ ಮಾತನಾಡಿ, ಸರ್ಕಾರಿ ಮತ್ತು ಅರೆಸರ್ಕಾರಿ ಶಾಲೆಗಳಲ್ಲಿ ವಾರಕ್ಕೆ ಆರುದಿನ ಮೊಟ್ಟೆ ಕೊಡುವ ಯೋಜನೆಯಿಂದ ಮಕ್ಕಳಲ್ಲಿ ಆಹಾರ ತಾರತಮ್ಯ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಸಸ್ಯಾಹಾರ ಪದ್ಧತಿಯುಳ್ಳ ಮಕ್ಕಳು ಮೊಟ್ಟೆ ತಿನ್ನುತ್ತಿಲ್ಲ. ಜೊತೆಗೆ ತಮ್ಮ ಎದುರು ಇತರ ಮಕ್ಕಳು ಮೊಟ್ಟೆ ತಿನ್ನುವುದನ್ನು ನೋಡುತ್ತಾ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ಬಿಸಿಯೂಟ ಅಡುಗೆ ಕೋಣೆ ಪರಿಸ್ಥಿತಿ ಸಹ ಕೆಟ್ಟು ಹೋಗಿದೆ ಎಂದರು.

ಈ ಹಿಂದೆ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಇತ್ತು. ಆಗ ಎಲ್ಲಾ ಮಕ್ಕಳು ಹಾಲನ್ನು ಕುಡಿಯುತ್ತಿದ್ದರು. ಆದರೆ ಮೊಟ್ಟೆ ಭಾಗ್ಯವನ್ನು ಎಲ್ಲ ಮಕ್ಕಳು ಒಪ್ಪುತ್ತಿಲ್ಲ. ಮೊಟ್ಟೆಯಲ್ಲಿ ಹಣ ಹೊಡೆಯಲಾಗುತ್ತದೆ. ಆದರೆ ಹಾಲಿನ ಹಣ ನೇರವಾಗಿ ಹಾಲು ಉತ್ಪಾದಕ ರೈತರಿಗೆ ಹೋಗುತ್ತದೆ. ಮೊಟ್ಟೆ ಕೊಡುವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಡಗಿದೆ ಎನ್ನುವ ಅನುಮಾನ ಜನರಲ್ಲಿ ಮೂಡಿದೆ ಎಂದು ಹೇಳಿದರು.

ವಿದ್ಯೆ ಕಲಿಸುವ ಸರಸ್ವತಿ ಮಂದಿರದಲ್ಲಿ ವಿದ್ಯಾರ್ಥಿಗಳ ನಡುವೆ ಭೇಧಭಾವ ಸೃಷ್ಟಿಸುತ್ತಿದೆ. ಈಗಾಗಲೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು ಸರ್ಕಾರದ ಇಂತಹ ನೀತಿ ಇನ್ನಷ್ಟು ಮಕ್ಕಳು ಸರ್ಕಾರಿ ಶಾಲೆಯಿಂದ ದೂರ ಹೋಗಲು ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೆ ಮೊಟ್ಟೆ ಭಾಗ್ಯವನ್ನು ತೆಗೆದು ಹಿಂದಿನಂತೆ ಎಲ್ಲಾ ಮಕ್ಕಳಿಗೆ ಕ್ಷೀರಭಾಗ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಹಾಸಭಾದ ವೀರಭದ್ರಪ್ಪ ಜಂಬಿಗೆ ಮಾತನಾಡಿದರು. ಉಪಾಧ್ಯಕ್ಷ ಅರುಣ್ ಪಾಟೀಲ್, ಪ್ರಮುಖರಾದ ಗುರು ಕಾಗೋಡು, ಚಂದ್ರಶೇಖರ್, ಶೋಭಾ, ವೀಣಾ, ಕುಮಾರಸ್ವಾಮಿ, ರಾಚಪ್ಪಸ್ವಾಮಿ ಹಾಜರಿದ್ದರು.

Share this article