ದಾಬಸ್‌ಪೇಟೆ: ಮಕ್ಕಳು ನಮ್ಮ ರಾಷ್ಟ್ರೀಯ ಸಂಪತ್ತು. ನಮ್ಮ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದು ತುಮಕೂರಿನ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಸೋಂಪುರ ಹೋಬಳಿಯ ಹಳೆನಿಜಗಲ್ ಬಳಿಯ ಹಿರೇಮಠದ ತಪೋವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಮಕ್ಕಳೇ ಈ ದೇಶದ ಸಂಪತ್ತು. ಅವರು ವೀರ, ಧೀರ, ಬುದ್ದಿವಂತರಾದರೆ ನಮ್ಮ ಮಂದಿರಗಳೂ ಸುರಕ್ಷಿತ. ನಮ್ಮ ಮಠಮಾನ್ಯಗಳೂ ಸುರಕ್ಷಿತ. ನಾವು ಕಟ್ಟಿ ಬೆಳೆಸಿದ ಸಂಸ್ಕೃತಿಯ ಸಂರಕ್ಷಕರು ಕೂಡ ಅವರೇ ಎಂದು ಹೇಳಿದರು.ಪೋಷಕರ ಪ್ರಯತ್ನ ತುಂಬ ಮುಖ್ಯ:
ಶಿಬಿರಾಧಿಕಾರಿ ಶಾಂತಕುಮಾರಿ ಜಗದೀಶ್ ಮಾತನಾಡಿ, ಮಕ್ಕಳನ್ನು ಅತಿಯಾಗಿ ಮುದ್ದಿಸುವುದೂ ಅಪಾಯಕಾರಿ. ಹಾಗೆಯೇ, ಅವರ ಸುತ್ತ ಭದ್ರವಾದ ಕೋಟೆ ಕಟ್ಟಿ ಅವರನ್ನು ಅತಿಯಾಗಿ ಹೆದರಿಸುವುದು, ಬೆದರಿಸುವುದು ಮತ್ತು ನಿಯಂತ್ರಿಸುವುದೂ ಬೇಡ. ನಿಮ್ಮ ಮಕ್ಕಳೇ ನಿಮ್ಮ ಸ್ವರ್ಗ. ಅವರೇ ನಿಮ್ಮ ಕನಸಿನ ಕಲ್ಪವೃಕ್ಷ ಮತ್ತು ಕಾಮಧೇನು. ಅವರನ್ನು ಪ್ರೀತಿ ಮಮತೆಯಿಂದ ಬೆಳಸಿ ನಮ್ಮ ಸಂಸ್ಕೃತಿ, ಪರಂಪರೆ ಕಲಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ವೇದಘೋಷ:ರಾಜ್ಯಮಟ್ಟದ ಈ ಮಕ್ಕಳ ಬೇಸಿಗೆ ಶಿಬಿರದಲ್ಲಿ 10 ಜಿಲ್ಲೆಗಳಿಂದ ಆಗಮಿಸಿದ್ದರು. 10ರಿಂದ 15 ವರ್ಷದ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರ ಸಮಾರೋಪ ಸಮಾರಂಭದಲ್ಲಿ ಮಕ್ಕಳು ವೇದಘೋಷ ಮಾಡಿದರು.
ಸೋಂಪುರ ಹೋಬಳಿಯ ಹಳೆನಿಜಗಲ್ ಬಳಿಯ ಹಿರೇಮಠದ ತಪೋವನದಲ್ಲಿ ರಾಜ್ಯ ಮಟ್ಟದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ತುಮಕೂರಿನ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.