ಪಠ್ಯೇತರ ಚಟುವಟಿಕೆಯಿಂದ ಮಕ್ಕಳು ಪ್ರಭುದ್ಧರಾಗುತ್ತಾರೆ: ಶಿಕ್ಷಣಾಧಿಕಾರಿ ಪರುಶುರಾಮಪ್ಪ

KannadaprabhaNewsNetwork |  
Published : Nov 16, 2025, 01:30 AM IST
ಪೊಟೋ: 15ಎಸ್‌ಎಂಜಿಕೆಪಿ10ಕನ್ನಡಪ್ರಭ ದಿನಪತ್ರಿಕೆ ಆಯೋಜಿಸಿರುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಭಾಗವಾಗಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸ್ಥಳೀಯ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  | Kannada Prabha

ಸಾರಾಂಶ

ಸಾಗರ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಕೇವಲ ಪಠ್ಯದ ಚಟುವಟಿಕೆಗಳಿಗೆ ಕಟ್ಟಿ ಹಾಕದೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಸಾಗರ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಕೇವಲ ಪಠ್ಯದ ಚಟುವಟಿಕೆಗಳಿಗೆ ಕಟ್ಟಿ ಹಾಕದೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಹೇಳಿದರು.

ಕನ್ನಡಪ್ರಭ ದಿನಪತ್ರಿಕೆ ಆಯೋಜಿಸಿರುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಭಾಗವಾಗಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸ್ಥಳೀಯ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಿದರೆ ಮಕ್ಕಳು ಹೆಚ್ಚು ಪ್ರಬುದ್ಧರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಅಂಕ ಗಳಿಕೆಯ ಹಿಂದೆ ಬಿದ್ದಿರುವ ಇಂದಿನ ಮಕ್ಕಳಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ, ಇದಕ್ಕೆ ಪ್ರಮುಖವಾಗಿ ಪೋಷಕರು ತನ್ಮೂಲಕ ಶಿಕ್ಷಕರು ಕಾರಣರಾಗುತ್ತಿದ್ದಾರೆ. ಪ್ರತಿ ಮಗುವಿನಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ, ಅಂಕಗಳಿಸುವ ಒತ್ತಡದಲ್ಲಿ ಅವರ ಪ್ರತಿಭೆ ಕಮರಿ ಹೋಗುತ್ತಿದೆ, ಮೊದಲು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು. ಮಕ್ಕಳು ಸಹ ತಮಗೆ ದೊರಕಿದ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಯಲ್ಲಿ ಬಹುಮಾನ ಪಡೆಯುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದರು.

ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ಮಾಡಬಹುದು: ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದ ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕ ದತ್ತಾತ್ರೇಯ ಭಟ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರೆ ಮಾತ್ರ ಸಾಧನೆ ಅಲ್ಲ, ಚಿತ್ರಕಲೆ ನೃತ್ಯ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಬಹುದು. ಇಂದಿನ ಪೋಷಕರು ಮಕ್ಕಳಿಗೆ ಕೇವಲ ಅಂಕಗಳಿಸಲಷ್ಟೇ ಒತ್ತಡ ಹಾಕುತ್ತಿದ್ದಾರೆ ಆದರೆ ಅವರ ಬೇರೆ ಪ್ರತಿಭೆಗಳ ಬಗ್ಗೆ ಗಮನಹರಿಸುವುದಿಲ್ಲ. ಹೀಗಾಗಿ ಪ್ರಾಥಮಿಕ ಹಂತದ ನಂತರದ ದಿನಗಳಲ್ಲಿ ಮಕ್ಕಳಲ್ಲಿರುವ ಪಠ್ಯೇತರ ಪ್ರತಿಭೆ ಮೂಲೆಗುಂಪಾಗುತ್ತಿರುವುದು ವಿಷಾದದ ಸಂಗತಿ ಎಂದರು.

ಕ್ಲಸ್ಟರ್ ಶಿಕ್ಷಕ ಯಶೋಧರ್ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮುಖ್ಯವಾದುದು. ಇವತ್ತಿನ ಮಕ್ಕಳಿಗೆ ಒತ್ತಡದ ಶಿಕ್ಷಣ ನೀಡುತ್ತಿದ್ದೇವೆ, ಮಕ್ಕಳನ್ನು ಓಡುವ ಕುದುರೆಯನ್ನಾಗಿ ಮಾಡಲು ದಾವಂತ ತೋರುತ್ತಿದ್ದೇವೆ, ಇದು ಸರಿಯಲ್ಲ ಎಂದು ಹೇಳಿದರು.ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಅಧ್ಯಕ್ಷ ಸರಸ್ವತಿ ನಾಗರಾಜ್, ಮಹಾಬಲೇಶ್ವರ, ಸವಿತಾ ಮಹಾಬಲೇಶ್ವರ, ರಮೇಶ್ ಯಮನೂರಪ್ಪ, ನಾಗರಾಜ್ ಹಾಜರಿದ್ದರು.

ವಿಜೇತ ವಿದ್ಯಾರ್ಥಿಗಳು

ಸಾಗರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪಟ್ಟಣದ ಸೇವಾ ಸಾಗರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಪಾವನ ಪ್ರಥಮ, ಪ್ರಗತಿ ಸಯುಕ್ತ ಪ್ರೌಢಶಾಲೆಯ ಕೆ.ಎಂ. ಹರ್ಷಿತ ದ್ವಿತೀಯ, ಸಂತ ಜೋಸೆಫರ ಪ್ರೌಢಶಾಲೆಯ ಅಮನ್ ಮನೋಜ ತೃತೀಯ ಬಹುಮಾನ ಪಡೆದರು. ಪ್ರಗತಿ ಶಾಲೆಯ ಆಧ್ಯ ಸದಾನಂದ ಆಚಾರ್ ಹಾಗೂ ರಾಮಕೃಷ್ಣ ಪ್ರೌಢಶಾಲೆಯ ಅಖಿಲೇಶ್ ಸಮಾಧಾನಕರ ಬಹುಮಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.

PREV

Recommended Stories

ಡಾ. ವಿ.ಎಸ್.ವಿ. ಪ್ರಸಾದರ ಸಮಾಜ ಸೇವೆ ಅವಿಸ್ಮರಣೀಯ
ಮಕ್ಕಳು ದೇಶದ ಆಸ್ತಿ: ಆಹಾರ ಸಚಿವ ಮುನಿಯಪ್ಪ