ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಚಿವ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಶಾಸಕರು ಮತ್ತು ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ. ಆರ್.ಗಿರೀಶ್ ಆಗ್ರಹಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಯ ಒಟ್ಟು 36 ಮೀಸಲು ಮತಕ್ಷೇತ್ರಗಳು ಹಾಗೂ ಪರಿಶಿಷ್ಟ ಪಂಗಡದ ಒಟ್ಟು 15 ಮೀಸಲು ಮತಕ್ಷೇತ್ರಗಳಲ್ಲಿ ಬಂಜಾರ ಸಮುದಾಯದ ಮತ ನಿರ್ಣಾಯಕವಾಗಿದೆ ಎಂದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಮತ್ತು ಶಿಫಾರಸ್ಸನ್ನು ಖಂಡಿಸಿ ‘ಬಿಜೆಪಿ ಹಠಾವೋ-ತಾಂಡಾ ಬಚಾವೋ’ ಎಂಬ ಘೋಷಣೆಯ ಮೂಲಕ ರಾಜ್ಯದ ಸುಮಾರು 40ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಬಂಜಾರ ಸಮುದಾಯ ಪ್ರಮುಖಪಾತ್ರ ವಹಿಸಿತ್ತು ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ 30 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾಗಿ ಹಾವೇರಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ರುದ್ರಪ್ಪ ಲಮಾಣಿ ಅವರಿಗೆ ಸಚಿವಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಕೆಲ ರಾಜಕೀಯ ಕಾರಣಗಳಿಂದ ಅವರಿಗೆ ಸಚಿವ ಸ್ಥಾನ ದೊರತಿಲ್ಲ ಎಂದರು.
ಮೂರು ಭಾರಿ ಶಾಸಕರಾಗಿರುವ ರುದ್ರಪ್ಪ ಲಮಾಣಿ ಅವರು 2014 ರಿಂದ ಸಂತ ಸೇವಾಲಾಲ್ ಗುರೂಜಿಯವರ ಜನ್ಮಸ್ಥಳವಾದ ಸೂರುಗೊಂಡನಕೊಪ್ಪ ಮಹಾಮಠದ ಸಮಿತಿಯ ಅಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿಯವರು ಮಹಾಮಠದ ಅಭಿವೃದ್ಧಿಗಾಗಿ ಸರ್ಕಾರದಿಂದ 50 ಕೋಟಿ ರು. ಅನುದಾನ ತಂದು ಅಭಿವೃದ್ದಿಪಡಿಸಿದ್ದಾರೆ. ಮಹಾಮಠದ 15 ಎಕರೆ ಜಾಗವನ್ನು ವಿಸ್ತರಿಸಿ, ಈಗ 28 ಎಕರೆಗೆ ವಿಸ್ತರಣೆ ಮಾಡಿ, ಧಾರ್ಮಿಕ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದಾರೆ ಎಂದರು.ಸಮುದಾಯದ ಕುಟುಂಬಗಳ ವಲಸೆ ಹೋಗುವ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗಬಾರದೆಂದು ಮಹಾಮಠದ ಆವರಣದಲ್ಲಿ ವಸತಿ ಶಾಲೆಯನ್ನು 50 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಈಗಾಗಲೇ 25 ಲಕ್ಷ ರು. ಮಂಜೂರಾಗಿ ಕಾಮಗಾರಿ ಆರಂಭಗೊಂಡಿದೆ ಎಂದರು.
ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಉಪಾಧ್ಯಕ್ಷ ನಾಗರಾಜ್ ನಾಯಕ್ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂಜಾರ ಸಮುದಾಯದ ಐವರು ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಾಗಿತ್ತು. ಇವರಲ್ಲಿ ರುದ್ರಪ್ಪ ಲಮಾಣಿ ಮಾತ್ರ ವಿಜಯ ಸಾಧಿಸಿದ್ದಾರೆ. ಹಾಗಾಗಿ ಈ ಬಾರಿಯ ಸಚಿವ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಜಯಾನಾಯ್ಕ್, ಮಂಜುನಾಥ ನಾಯ್ಕ್, ವೀರೇಶ್ ನಾಯ್ಕ್ ಉಪಸ್ಥಿತರಿದ್ದರು.