ಸಮಾರೋಪ ಸಮಾರಂಭ । ಮೈಸೂರು ಸಾಂಪ್ರದಾಯಿಕ ಶೈಲಿ ಕಲಿಕೆ । ಚಿತ್ರಕಲಾ ಪ್ರದರ್ಶನ
ಕನ್ನಡಪ್ರಭ ವಾರ್ತೆ ಹಾಸನಪ್ರಸ್ತುತದಲ್ಲಿ ಮಾಧ್ಯಮದಲ್ಲಿ ಬಿತ್ತರವಾಗುವ ವಿಕೃತವಾದ ಸನ್ನಿವೇಶಗಳಿಂದ ಭಯಾನಕ ಬದುಕು ಅನುಭವಿಸಬೇಕಾಗಿದೆ. ಇಂತಹ ಚಿತ್ರಕಲೆ ಶಿಬಿರಗಳು ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ ಮನಸ್ಸಿಗೆ ಶಾಂತಿ ಕೊಡುತ್ತದೆ ಎಂದು ಮೈಸೂರಿನ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ಪ್ರಾಂಶುಪಾಲ ಹಾಗೂ ಚಿತ್ರ ಕಲಾವಿದ ಕೆ.ಸಿ.ಮಹದೇವಶೆಟ್ಟಿ ಅಭಿಪ್ರಾಯಪಟ್ಟರು.
ಹಾಸನದ ವಿದ್ಯಾನಗರ ಕಲಾಶ್ರೀ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಚಿತ್ರಕಲಾ ಫೌಂಡೇಷನ್ ಹಾಗೂ ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಗದಗ ಜಂಟಿಯಾಗಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರೋತ್ಸವದ ಸಮಾರೋಪ ಹಾಗೂ ಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.‘ಚಿತ್ರಕಲೆಗಳು ಒಂದು ಅಧ್ಯಾತ್ಮವನ್ನು, ಮನಸ್ಸಿಗೆ ಶಾಂತಿ ಮತ್ತು ಒಳ್ಳೆ ಸಂಸ್ಕಾರವನ್ನು ನೀಡುವಂತಹ ಕಲಾ ಪ್ರಕಾರವಾಗಿದೆ. ಇಂತಹ ಕಲಾಕೃತಿಗಳನ್ನು ಇವತ್ತಿನ ಮಕ್ಕಳು ಮತ್ತು ಯುವಜನರಲ್ಲಿ ಅತ್ಯಂತ ಅವಶ್ಯಕವಾಗಿದೆ. ಚಿತ್ರಕಲೆಯಲ್ಲಿ ಪ್ರಾಂಶುಪಾಲರಾಗಿ ನಾನು ೩೨ ವರ್ಷ ಸೇವೆ ಮಾಡಿದ್ದು, ಕಲೆಗಳಲ್ಲಿ ವಿಭಿನ್ನವಾದ ಕಲಾ ಪ್ರಕಾರಗಳನ್ನು ಭಾರತದ ಎಲ್ಲಾ ಭಾಗಗಳಲ್ಲೂ ನೋಡುತ್ತೇವೆ. ಆದರೆ ಒಂದು ಸಾಂಪ್ರದಾಯಕ ಕಲಾಕೃತಿಯನ್ನು ಗಮನಿಸಿದರೆ ಮೈಸೂರು ಶೈಲಿ, ಸಾಂಪ್ರದಾಯಕ ಶೈಲಿಯ ಚಿತ್ರಕಲೆ ತುಂಬ ಅತ್ಯಂತ ಎತ್ತರದ, ಪ್ರಭಾವಿ ಚಿತ್ರಕಲೆ ಎಂದು ಹೇಳಬಹುದು’ ಎಂದು ಹೇಳಿದರು.
‘ವಿಜಯನಗರ ಅರಸು ಕಾಲದಲ್ಲಿ ಪಥನ ನಂತರ ಅಲ್ಲಿದ್ದ ಕಲಾವಿದರು ಲೇಪಾಕ್ಷಿ, ಸುರಪುರ, ಕಿನ್ನಾಳ, ಮೈಸೂರು ಭಾಗಕ್ಕೆ ಚದುರಿ ಹೋಗುತ್ತಾರೆ. ಅಲ್ಲಿ ನೆಲೆ ನಿಂತಂತ ಕಲಾವಿದರು ಒಂದು ಹೊಸ ಹೊಸ ಶೈಲಿಯನ್ನು ಹುಟ್ಟು ಹಾಕುತ್ತಾರೆ. ಹೊಸ ಕಲಾಕೃತಿಯೇ ಮೈಸೂರು ಶೈಲಿಯ ಕಲಾಶೈಲಿ ಆಗಿದ್ದು, ಇದೊಂದು ಸಾಂಪ್ರದಾಯಕ ಶೈಲಿ ಆಗಿರುವುದರಿಂದ ಇಲ್ಲಿನ ಚಿತ್ರಗಳನ್ನು ದೇವಾದಿ ದೇವತೆಗಳ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿರುವ ಕಲಾ ಪ್ರಕಾರವಾಗಿದೆ. ಹಿಂದೆ ಇದು ದೇವರು ಪೋಟೋಗಳು ಬರುವ ಮೊದಲು ಶ್ರೀಮಂತರ ಸ್ವತ್ತಾಗಿತ್ತು. ಈಗ ಜನಸಾಮಾನ್ಯರ ಸ್ವತ್ತಾಗಿದೆ’ ಎಂದು ತಿಳಿಸಿದರು.ಚಿತ್ರಕಲಾ ಫೌಂಡೇಶನ್ ಸ್ಥಾಪಕ ಅಧ್ಯಕ್ಷ, ಚಿತ್ರ ಕಲಾವಿದ ಬಿ.ಎಸ್.ದೇಸಾಯಿ ಮಾತನಾಡಿ, ‘ಒಂದು ಶಿಬಿರ ಹಾಗೂ ಶಿಬಿರೋತ್ಸವವನ್ನು ಹಾಸನ ನಗರದಲ್ಲಿ ಮಾಡಲಾಗಿದೆ. ಇಂತಹ ಕಲಾಕೃತಿಯನ್ನು ಮಾಡುವ ಮೂಲಕ ಸಂಸ್ಕಾರವನ್ನು ಹುಟ್ಟು ಹಾಕುವ ಮೂಲಕ ಸಮಾಜದಲ್ಲಿನ ವಿಕೃತಿಯನ್ನು ತೊಳೆದು ಹಾಕುವುದಕ್ಕೆ ಸೂಕ್ತವಾಗಲಿದೆ. ಕಲೆ ಎಂದರೆ ಚಿತ್ರಕಲೆ, ನೃತ್ಯ, ಸಂಗೀತ, ಸಾಹಿತ್ಯ ಆಗಿರಬಹುದು. ಯಾವುದೇ ಪ್ರಕಾರಗಳಲ್ಲಿ ಮನಸ್ಸನ್ನು ಅರಳಿಸುವಂತಹ ಪ್ರಕ್ರಿಯೆಗಳು ನಡೆಯುತ್ತದೆ’ ಎಂದರು.
ಗದಗದ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ವಿಜಯ ಕಿರೇಸೂರ, ಚಿತ್ರಕಲಾ ಶಿಬಿರೋತ್ಸವ ಸಂಚಾಲಕ ಬಿ.ಎಸ್.ದೇಸಾಯಿ, ನಿರ್ಮಲ ಚಿತ್ರಕಲಾ ಶಾಲೆ ಪ್ರಾಂಶುಪಾಲ ಆರ್.ಸಿ.ಕಾರದಕಟ್ಟಿ, ಕುಶಾಲನಗರದ ಚಿತ್ರಕಲಾವಿದ ಉ.ರಾ.ನಾಗೇಶ್, ಬೆಂಗಳೂರಿನ ಆರ್. ಚೇತನ್, ಮೈಸೂರಿನ ಡಿ.ತೇಜಸ್ವಿನಿ, ಚಾಮರಾಜನಗರದ ಎಸ್.ಬಸವರಾಜು, ಚಿತ್ರದುರ್ಗದ ಗಡಾರಿ ಶಿವಬಾಬು, ಮಂಡ್ಯದ ನಂದನ್, ಸುಪ್ರಿತ್, ಕೃಷ್ಣಚಾರಿ, ಚಂದ್ರಕಾಂತ್, ಬಸವರಾಜು ಇದ್ದರು.