ಧಾರವಾಡ: ಮಕ್ಕಳಲ್ಲಿ ಸಂಸ್ಕೃತಿಯನ್ನು ಬಿಂಬಿಸಿದಾಗ ಮಾತ್ರ ಸುಂಸ್ಕೃತರನ್ನಾಗಿ ಮಾಡಲು ಸಾಧ್ಯ ಎಂದು ಸ್ತ್ರೀರೋಗ ತಜ್ಞೆ ಡಾ. ಮಾಧುರಿ ಕಬಾಡಿ ಪೂಜಾರಿ ಹೇಳಿದರು.
ಮಕ್ಕಳಿಗೆ ದಾರ್ಶನಿಕರ, ಮಹಾತ್ಮರ ಸಂದೇಶಗಳ ತಿಳಿವಳಿಕೆ ನೀಡುವುದು ಅವಶ್ಯಕ. ಮಕ್ಕಳು, ಯುವಜನರು ವಿದ್ಯಾರ್ಜನೆ ಎಂಬ ಬಂಡಿಯನ್ನು ಓಡಿಸುವ ಮೂಲಕ ಪ್ರಜ್ಞಾವಂತರಾಗಿ ಈ ದೇಶದ ಉತ್ತಮ ಪ್ರಜೆಗಳಾಗಬೇಕು. ಸಮಯದ ಸದ್ಬಳಕೆ ಮಾಡುವ ಮೂಲಕ ಸದ್ವಿಚಾರದ ಮಾರ್ಗದತ್ತ ಸಾಗಿ ಸಾತ್ವಿಕ ಗುಣ ಬೆಳೆಸಿಕೊಂಡು ನಿಮ್ಮ ಜೀವನದ ಬಂಡಿಯನ್ನು ಸುಗಮವಾಗಿ, ಸ್ವಾಸ್ಥ್ಯವಾಗಿ ನಡೆಸಬೇಕು ಎಂದರು.
ಶ್ರೀ ಬನಶಂಕರಿ ಭವನ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಲೋಲೇನವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ಸಾಧನೆಯಲ್ಲಿ ಸಾಮರಸ್ಯ ಪಡೆಯುವುದಕ್ಕೆ ಅರಿವು ಅವಶ್ಯ. ನಮ್ಮ ಶರೀರದಲ್ಲಿ ಸುಪ್ತವಾದ ಜ್ಯೋತಿಯನ್ನು ಜಾಗೃತಗೊಳಿಸಿ ಸಹಜ ರೀತಿಯಲ್ಲಿ ನೈಸರ್ಗಿಕ, ವೈಚಾರಿಕತೆಯ ಅನುಭಾವವನ್ನು ನಮ್ಮ ಮನದಾಳದಲ್ಲಿ ತುಂಬಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮಣ್ಣ ನಡಕಟ್ಟಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆ, ಉಪನ್ಯಾಸ ಹಾಗೂ ಸತ್ಸಂಗ, ಪ್ರವಚನ, ಸಾಮಾಜಿಕ, ಕಾರ್ಯಕ್ರಮದಲ್ಲಿ ಜ್ಞಾನಿಗಳಿಂದ ಅನುಭಾವ ಒದಗಿಸುವುದು ಅವಶ್ಯವಾಗಿದೆ ಎಂದರು.