ಬೇಂಗ್ರೆ ಗ್ರಾಮ ಪಂಚಾಯಿತಿಯಲ್ಲಿ ಶಾಲೆ, ಊರಿನ ಅಭಿವೃದ್ಧಿ ಬಗ್ಗೆ ಚರ್ಚಿಸಿದ ಮಕ್ಕಳು

KannadaprabhaNewsNetwork |  
Published : Nov 23, 2024, 12:36 AM IST
ಭಟ್ಕಳ ಬೇಂಗ್ರೆ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ ನಡೆಯಿತು. | Kannada Prabha

ಸಾರಾಂಶ

ಗ್ರಾಮಸಭೆಯನ್ನು ಸಣ್ಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಹರಿ ದುರ್ಗಾದಾಸ ಮೊಗೇರ ಉದ್ಘಾಟಿಸಿದರು.

ಭಟ್ಕಳ: ತಾಲೂಕಿನ ಬೇಂಗ್ರೆ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಸುತ್ತೋಲೆಯಂತೆ ಮಕ್ಕಳ ಗ್ರಾಮಸಭೆ ನಡೆಸಲಾಯಿತು.

ಗ್ರಾಮಸಭೆಯನ್ನು ಸಣ್ಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಹರಿ ದುರ್ಗಾದಾಸ ಮೊಗೇರ ಉದ್ಘಾಟಿಸಿದರು.

ಗ್ರಾಮಸಭೆಯ ಅಧ್ಯಕ್ಷತೆಯನ್ನು ಸಾರದಹೊಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಜನನಿ ನಾರಾಯಣ ನಾಯ್ಕ ವಹಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆಗೆ ಸಂಬಂಧಿಸಿದ ಹಾಗೂ ಶಾಲಾ ಅಭಿವೃದ್ಧಿ, ಗ್ರಾಮ ಆರೋಗ್ಯ, ಗ್ರಾಮ ಪಂಚಾಯಿತಿ ಮಟ್ಟದ ಶಾಲೆಯಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿ ಸಭಾ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದುರ್ಗದಾಸ ದೇವಪ್ಪ ಮೊಗೇರ ಅವರು, ಮಕ್ಕಳ ಗ್ರಾಮಸಭೆಯ ಮಹತ್ವ ತಿಳಿಸಿಕೊಟ್ಟರು.

ಸದಸ್ಯೆ ಬೇಬಿ ಮಾರುತಿ ನಾಯ್ಕ ಮಾತನಾಡಿ, ಮಕ್ಕಳ ಗ್ರಾಮಸಭೆಯಲ್ಲಿ ಮುಕ್ತವಾಗಿ ಮಕ್ಕಳು ತಮ್ಮ ಆಶಯಗಳನ್ನು ಹೇಳಿಕೊಳ್ಳುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯಲ್ಲಿ ನಡೆಸಲಾಗುತ್ತಿದ್ದು, ಮಕ್ಕಳ ಗ್ರಾಮಸಭೆ ಮಕ್ಕಳ ಧ್ವನಿಯಾಗಿ ಅವರ ಆಶಯವನ್ನು ಪೂರೈಸಿದೆ. ಆ ಮೂಲಕ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಗ್ರಾಮಸಭೆ ಸಹಕಾರಿಯಾಗಿದೆ ಎಂದರು.

ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉದಯ ಬೊರಕರ, ಸಿಆರ್‌ಪಿ, ಎಲ್ಲ ಶಾಲಾ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು. ಜಿಲ್ಲಾಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ₹5 ಸಾವಿರ ವಿಶೇಷ ಗೌರವಧನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಅದರಂತೆ ಗ್ರಾಮ ಪಂಚಾಯಿತಿಯಿಂದ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಪರಿಕರವನ್ನು ನೀಡಲಾಯಿತು. ಕಾರ್ಯಕ್ರಮದ ನಿರೂಪಣೆ, ಸಭಾ ನಿರ್ವಹಣೆ ಶಾಲಾ ಮಕ್ಕಳಿಂದಲೆ ಆಗಿದ್ದು ವಿಶೇಷವಾಗಿತ್ತು.ಕೋಟೆಬೈಲು ಪ್ರೌಢಶಾಲೆಯಲ್ಲಿ ಮಕ್ಕಳ ಹಬ್ಬ

ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಕೋಟೆಬೈಲು ಪ್ರೌಢಶಾಲಾ ವಿದ್ಯಾರ್ಥಿಗಳು ಇತ್ತೀಚೆಗೆ ತಮ್ಮ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬ ಹಾಗೂ ಪ್ರೇರಣಾ ಶಿಬಿರದಲ್ಲಿ ಸ್ವತಃ ವಿಜ್ಞಾನದ ಪ್ರಯೋಗಗಳನ್ನು ನಿರ್ವಹಿಸಿ ಪ್ರಾಥಮಿಕ ಶಾಲೆಗಳಿಂದ ಬಂದ 42 ವಿದ್ಯಾರ್ಥಿಗಳಿಗೆ ವಿವರಿಸಿ ತಾವೇ ಶಿಕ್ಷಕರಾಗಿ ಮಕ್ಕಳ ಹಬ್ಬಕ್ಕೆ ಮೆರುಗು ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಆರ್‌ಸಿ ವಿನಾಯಕ ಜಿ. ಅವಧಾನಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಒಂದು ಭಾಗ್ಯವಾಗಿದೆ. ಈ ಸಂಸ್ಥೆಯ ಸಿಬ್ಬಂದಿ ಸಂಘಟಿತ ಪ್ರಯತ್ನವೇ ಮಕ್ಕಳ ಹಬ್ಬಕ್ಕೆ ಸಾಕ್ಷಿ ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ದೀಪಕ ನಾಯ್ಕ, ನರೇಗಾದ ಎಡಿ ಕಿರಣಕುಮಾರ್ ಎಂ.ಜಿ., ಮುಖ್ಯ ಶಿಕ್ಷಕ ಸುರೇಶ ನಾಯ್ಕ, ಎಸ್‌ಡಿಎಂಸಿ ಸದಸ್ಯೆ ಸವಿತಾ ಹಳ್ಳೆರ ಇದ್ದರು. ಗಣೇಶ ಹೆಗಡೆ ಮತ್ತು ರೋಹಿಣಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ತನುಜಾ ನಾಯ್ಕ ವಂದಿಸಿದರು. ಮಾಧುರಿ ಭಟ್, ಪರ್ಪೆತ್ ರೋಡ್ರಗಿಸ್, ಶಾಮಲಾ ನಾಯ್ಕ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ