ಯಳಂದೂರಿನ ಗುಂಬಳ್ಳಿಯಲ್ಲಿ ಪಡಿತರ ವಿತರಣೆ ಲೋಪ; ದೂರು

KannadaprabhaNewsNetwork | Published : Nov 23, 2024 12:35 AM

ಸಾರಾಂಶ

ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ತಿಂಗಳು ಬೆರಳಚ್ಚು ಇರಿಸಿಕೊಂಡು ಪಡಿತರವನ್ನು ವಿತರಣೆ ಮಾಡಿಲ್ಲ. ಇದನ್ನು ಪ್ರಶ್ನಿಸಿಸುವ ಮಹಿಳೆಯರೊಂದಿಗೆ ಈ ನ್ಯಾಯಬೆಲೆ ಅಂಗಡಿ ಮಾಲೀಕ ಅನುಚಿತವಾಗಿ ವರ್ತಿಸುತ್ತಾನೆ ಎಂದು ಗ್ರಾಮಸ್ಥರು ಶುಕ್ರವಾರ ನಡೆದ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮಸಭೆಯಲ್ಲಿ ಆರೋಪಿಸಿದರು.

ಲೆಕ್ಕ ತಪಾಸಣಾ ಗ್ರಾಮಸಭೆಯಲ್ಲಿ ಚರ್ಚೆ । ಪ್ರಮುಖ ಇಲಾಖೆ ಅಧಿಕಾರಿಗಳು ಸಭೆಗೆ ಗೈರು । ಮಹಿಳೆಯರ ಜತೆ ಮಾಲೀಕ ಅನುಚಿತ ವರ್ತನೆ ಆರೋಪ

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ತಿಂಗಳು ಬೆರಳಚ್ಚು ಇರಿಸಿಕೊಂಡು ಪಡಿತರವನ್ನು ವಿತರಣೆ ಮಾಡಿಲ್ಲ. ಇದನ್ನು ಪ್ರಶ್ನಿಸಿಸುವ ಮಹಿಳೆಯರೊಂದಿಗೆ ಈ ನ್ಯಾಯಬೆಲೆ ಅಂಗಡಿ ಮಾಲೀಕ ಅನುಚಿತವಾಗಿ ವರ್ತಿಸುತ್ತಾನೆ ಎಂದು ಗ್ರಾಮಸ್ಥರು ಶುಕ್ರವಾರ ನಡೆದ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮಸಭೆಯಲ್ಲಿ ಆರೋಪಿಸಿದರು.

ಗ್ರಾಮದ ರುಕ್ಮಿಣಿ ಎಂಬುವರು ಈ ಬಗ್ಗೆ ಪಿಡಿಒಗೆ ದೂರು ನೀಡಿ ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳು ಈ ಗ್ರಾಮಸಭೆಯಲ್ಲಿ ಗೈರಾಗಿದ್ದಾರೆ. ಕಳೆದ ತಿಂಗಳು ಕೆಲವರಿಗೆ ಪಡಿತರ ವಿತರಣೆ ಮಾಡಿಲ್ಲ. ಈ ತಿಂಗಳು ಮುಗಿಯುತ್ತ ಬಂದಿದ್ದರೂ ಇನ್ನು ಪರಿತರ ವಿತರಣೆ ಮಾಡಿಲ್ಲ. ಪ್ರತಿ ತಿಂಗಳು ಈ ಸಮಸ್ಯೆ ಎದುರಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಅಸಂಬದ್ಧವಾಗಿ ಉತ್ತರಿಸುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಸರಿಯಾಗಿಲ್ಲ. ರಸ್ತೆ ದುರಸ್ತಿ ಮಾಡಿ ಎಂದರೆ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಸಂಬಂಧಪಟ್ಟ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಸಾಮಾನ್ಯ ಜನರ ಸಮಸ್ಯೆಯನ್ನು ಪಂಚಾಯಿತಿಯಲ್ಲಿ ಆಲಿಸುವರೇ ಇಲ್ಲ. ಮೂಲ ಸಮಸ್ಯೆಗಳ ನಿವಾರಣೆಗೆ ದೂರು ನೀಡಿದರೂ ಸ್ಪಂದಿಸುವುದಿಲ್ಲ ಎಂದು ಹಲವು ಗ್ರಾಮಸ್ಥರು ದೂರಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಪಡೆದುಕೊಂಡವರಿಗೆ ಉದ್ಯೋಗ ನೀಡುತ್ತಿಲ್ಲ. ಕೆಲವು ಗುತ್ತಿಗೆದಾರರೇ ಕೆಲಸವನ್ನು ನಿರ್ವಹಿಸುತ್ತಾರೆ ಎಂದು ಗ್ರಾಮಸ್ಥರು ದೂರಿದರು.

ಇದಕ್ಕೆ ಪಿಡಿಒ ನಟರಾಜ್ ಉತ್ತರಿಸಿ, ಜಾಬ್‌ಕಾರ್ಡ್ ಪಡೆದುಕೊಂಡಿರುವರು ಕೆಲಸವನ್ನು ನೀಡುವಂತೆ ನಮಗೆ ಅರ್ಜಿ ಸಲ್ಲಿಸಿದರೆ ಖಂಡಿತವಾಗಿಯೂ ಕೆಲಸ ನೀಡುತ್ತೇವೆ. ಮೂಲ ಸಮಸ್ಯೆ ನಿವಾರಣೆಗೆ ಮಾನ್ಯತೆ ನೀಡಲಾಗುವುದು. ಪಡಿತರ ವಿತರಣೆಯಲ್ಲಿರುವ ಲೋಪ ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ನೋಡಲ್ ಅಧಿಕಾರಿ, ಕೃಷಿ, ಪಂಚಾಯತ್‌ರಾಜ್, ಲೋಕೋಪಯೋಗಿ ಸೇರಿದಂತೆ ವಿವಿಧ ಪ್ರಮುಖ ಇಲಾಖೆಯ ಅಧಿಕಾರಿಗಳ ಗೈರಲ್ಲೇ ಗ್ರಾಮಸಭೆ ನಡೆಯಿತು. ಅಲ್ಲದೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಸಭೆಯಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಾಗಿ ಕಂಡು ಬಂದಿತು. ಮುಂದೆ ಈ ತರಹ ಸಭೆಯನ್ನು ಆಯೋಜನೆ ಮಾಡಬಾರದು ಎಂದು ಸಾರ್ವಜನಿಕರು ಗ್ರಾಪಂ ಪಿಡಿಒಗೆ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.

ಗ್ರಾಪಂ ಅಧ್ಯಕ್ಷೆ ಮೀನಾ, ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಮಹೇಶ್, ನಂಜನಾಯಕ, ರಾಜೇಂದ್ರ, ಚಂದ್ರು, ಶಕುಂತಲಾ, ಶಾಂತಮ್ಮ, ಬಿಲ್‌ ಕಲೆಕ್ಟರ್‌ಗಳಾದ ಕೃಷ್ಣನಾಯಕ, ಗೋವಿಂದರಾಜು ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಇದ್ದರು.

Share this article