ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆ ಸಂಸ್ಕಾರ ಅಗತ್ಯ: ಗೋಪಾಲಕೃಷ್ಣ ಭಟ್ಟ

KannadaprabhaNewsNetwork |  
Published : Apr 04, 2026, 02:00 AM IST
ವಿಶ್ವದರ್ಶನದಲ್ಲಿ ಭಾರತೀಯ ಜೀವನ ಶಿಕ್ಷಣ ಶಿಬಿರ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ ಎನ್ನುವ ಪರಂಪರೆಯಲ್ಲಿ ಬೆಳೆದವರು. ನಮ್ಮ ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆ ಇಂತಹ ಸಂಸ್ಕಾರದ ಅಗತ್ಯವಿದೆ ಎಂದು ಜ್ಯೋತಿರ್ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.

ಯಲ್ಲಾಪುರ: ಜನ್ಮ ನೀಡಿದ ತಾಯಿ, ಭೂತಾಯಿಗಿಂತಲೂ ಮಿಗಿಲಾದದ್ದಿಲ್ಲ. ಭೋಗದ ಸಂಸ್ಕೃತಿ ನಮ್ಮದಲ್ಲ. ಬೆಳಕನ್ನು ನೀಡುವ ಸಂಸ್ಕೃತಿ ನಮ್ಮದು. ತಾಯಿ ಎಷ್ಟು ಪ್ರಧಾನವೋ ಅಷ್ಟೇ ತಂದೆಯೂ ಪ್ರಧಾನ. ನಂತರ ಗುರುಗಳು. ಅವರಿಗೆ ನಿತ್ಯವೂ ಸಾಷ್ಟಾಂಗ ಪ್ರಣಾಮ ಮಾಡಿಯೇ ನಮ್ಮ ದಿನದ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಜ್ಯೋತಿರ್ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.

ಶುಕ್ರವಾರ ವಿಶ್ವದರ್ಶನ ಶಿಕ್ಷಣ ಸಮೂಹದ ಆವಾರದಲ್ಲಿ ಭಾರತೀಯ ಜೀವನ ಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ ಎನ್ನುವ ಪರಂಪರೆಯಲ್ಲಿ ಬೆಳೆದವರು. ನಮ್ಮ ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆ ಇಂತಹ ಸಂಸ್ಕಾರದ ಅಗತ್ಯವಿದೆ. ಈ ಶಿಬಿರದಲ್ಲಿ ಯೋಗದಿಂದ ಪ್ರಾರಂಭಗೊಂಡು ಜೀವನಕ್ಕೆ ಬೇಕಾದ ಎಲ್ಲ ಸಂಸ್ಕಾರಯುತ ಚಿಂತನೆಗಳನ್ನು ಹತ್ತು ದಿನಗಳ ಕಾಲ ನೀಡುತ್ತಿರುವುದು ಒಂದು ಸಾಧನೆ ಎನ್ನಬಹುದು.ಯೋಗ ಇದ್ದವನಿಗೆ ರೋಗ ಬಾರದು. ಪರಮಾತ್ಮನ ಅನುಗ್ರಹವೂ ಲಭಿಸುತ್ತದೆ. ಇಂದ್ರಿಯ ಸರಿಯಾಗಿ ಕೆಲಸ ಮಾಡುವುದಕ್ಕೆ ನಿತ್ಯ ಯೋಗದ ಅಗತ್ಯತೆಯಿದೆ. ಅಂದಾಗ ಮಾತ್ರ ಜೀವನದಲ್ಲಿ ಎಂತಹ ಸಾಧನೆಯನ್ನೂ ಮಾಡಬಹುದು. ಅಂತಹ ಉದಾತ್ತವಾದ ಶ್ರೇಷ್ಠ ಸಂಸ್ಕೃತಿ ಭಾರತೀಯ ಶಿಕ್ಷಣದಲ್ಲಿದೆ. ನಮ್ಮ ಸಂಸ್ಕೃತಿಯಲ್ಲಿ ಗುರುವಿಗೂ ಅಷ್ಟೇ ಪ್ರಧಾನತೆ ನೀಡಲಾಗಿದೆ. ಗುರು ನಮ್ಮಲ್ಲಿರುವ ಕ್ಲೇಷವನ್ನು ನಾಶ ಮಾಡುತ್ತಾನೆ. ಆ ದೃಷ್ಟಿಯಿಂದ ವಿಶ್ವದರ್ಶನ ಸಂಸ್ಥೆ ಇಂತಹ ಉತ್ತಮ ಅನೇಕ ಕಾರ್ಯಗಳನ್ನು ಮಾಡುತ್ತಿದೆ. ಅದನ್ನು ನಾವೆಲ್ಲ ಬೆಂಬಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಮಾಜದಲ್ಲಿ ಶ್ರೇಷ್ಠ ಸಾಧಕರಿಗೆ, ಹಿರಿಯರಿಗೆ, ಸಜ್ಜನರಿಗೆ, ಜ್ಞಾನಿಗಳಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ಅದನ್ನು ನಾವು ಪಡೆಯಬೇಕಾದರೆ ಜನ್ಮ ನೀಡಿದ ತಂದೆ-ತಾಯಿಗಳ ಮಾತನ್ನು ತಪ್ಪದೇ ಪಾಲಿಸಬೇಕು. ಗುರುಹಿರಿಯರ ಮಾತನ್ನೂ ಗೌರವಿಸಬೇಕು. ಆಗ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳುತ್ತೇವೆ. ಜೀವನದ ದೊಡ್ಡ ಸಾಧನೆಗೆ ಶಿಸ್ತು, ಶ್ರಮ ಅತ್ಯಂತ ಮಹತ್ವವಾದದ್ದು. ಶಾಲೆಗಳಲ್ಲಿ ಸೀಮಿತವಾದ ಪಠ್ಯಕ್ರಮಕ್ಕೆ ಪೂರಕವಾದ ಪಾಠ ಪ್ರವಚನ ನಡೆಸಲಾಗುತ್ತದೆ. ಹಾಗಾಗಿಯೇ ನಮ್ಮ ಸಂಸ್ಥೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂಬ ಸದಿಚ್ಛೆಯಿಂದ ಕಳೆದ ವರ್ಷದಿಂದ ಈ ಶಿಬಿರ ಆಯೋಜಿಸಿದ್ದೇವೆ. ನಮ್ಮ ಸಂಸ್ಥೆಯ ಉದ್ದೇಶವೂ ಅದೇ ಆಗಿದೆ ಎಂದರು.

ಶಿಬಿರದ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ವಿಶ್ವದರ್ಶನದ ನಿರ್ದೇಶಕ ಸಿಎ ವಿಘ್ನೇಶ್ವರ ಗಾಂವ್ಕರ, ಸಿಬಿಎಸ್‌ಸಿ ಪ್ರಾಚಾರ್ಯರಾದ ಮಹಾದೇವಿ ಭಟ್ಟ, ಶಿಬಿರದ ಪ್ರಮುಖರಾದ ರಾಮಕೃಷ್ಣ ಕವಡಿಕೆರೆ, ಸಮರ್ಥ ಗಾಂವ್ಕರ ಮತ್ತಿತರರು ಉಪಸ್ಥಿತರಿದ್ದರು.

ಪಿಯು ಕಾಲೇಜು ಪ್ರಾಚಾರ್ಯ ಡಾ. ಡಿ.ಕೆ. ಗಾಂವ್ಕರ ಸ್ವಾಗತಿಸಿದರು. ಶಿಕ್ಷಕ ಶಿವಪ್ರಸಾದ ಭಟ್ಟ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್‌ 6ರಂದು ಹಾವೇರಿ ವಿವಿ ಘಟಿಕೋತ್ಸವ, 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮುಖ್ಯ