ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯ: ಶಾಸಕ ಡಾ. ಚಂದ್ರು ಲಮಾಣಿ

KannadaprabhaNewsNetwork | Updated : Oct 27 2023, 12:31 AM IST

ಸಾರಾಂಶ

ಮುಳಗುಂದ ಪಟ್ಟಣದ ಹಳೇವುಡಾ ಶ್ರೀಗ್ರಾಮ ದೇವತಾ ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ನಡೆದ ಶ್ರೀ ದೇವಿ ಪುರಾಣ ಮಂಗಲೋತ್ಸವ ನಡೆಯಿತು.

ಮುಳಗುಂದ:ಮಕ್ಕಳಿಗೆ ಒಳ್ಳೆಯ ಸಂಸ್ಕಾರಯುತ ಶಿಕ್ಷಣವನ್ನ ನೀಡಿ, ಅಂಕಗಳಿಗೆ ಸೀಮಿತವಾಗುವುದು ಬೇಡ. ನಮ್ಮ ಸಂಪ್ರದಾಯ, ಸಂಸ್ಕೃತಿ ಮೂಡುವ ರೀತಿಯಲ್ಲಿ ಶಿಕ್ಷಣ ನೀಡಿ, ಇಂಥಹ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ, ಪುರಾಣ, ಪ್ರವಚನದಂತಹ ಕಾರ್ಯಕ್ರಮಗಳಿಗೆ ಕಳಿಸಿ ಅವರಿಗೆ ಶರಣರು ಹೇಳುವ ಪುರಾಣ, ಪ್ರವಚನಗಳನ್ನು ಕೇಳಿ ಸಂಸ್ಕಾರಯುತ ಜೀವನ ನಡೆಸವಂತಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಹಳೇವುಡಾ ಶ್ರೀಗ್ರಾಮ ದೇವತಾ ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ನಡೆದ ಶ್ರೀ ದೇವಿ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಗೀಳಿನಿಂದ ಮಕ್ಕಳು ದುರ್ನಡೆಗಳಿಗೆ ಕಾರಣವಾಗುತ್ತಿದೆ. ವಯಸ್ಕರು ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನ ನಾಶಮಾಡಿಕೊಳ್ಳತ್ತಿದ್ದಾರೆ. ತಂದೆ ತಾಯಿಗಳಿಗೆ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಅದು ಆಗಬಾರದು ತಮ್ಮ ಮಗ ಸಂಸ್ಕಾರಯುತವಾಗಿದ್ದಾನೆ ಅನ್ನೋದನ್ನ ಮಾತ್ರ ದೃಢಪಡಿಸಿಕೊಳ್ಳಿ ಸಾಕು ಅವರನ್ನು ಅಂಕಗಳಿಗೆ ಸೀಮಿತ ಮಾಡಬೇಡಿ. ಅವಕಾಶಗಳು ಒಂದೇ ಸಾರಿ ಬರುತ್ತವೆ. ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಂಡಲ್ಲಿ ನಮ್ಮ ಜೀವನದಲ್ಲಿ ಗಮನಾರ್ಹವಾದ ಬದಲಾವಣೆ ನಾವು ಕಾಣಬಹುದಾಗಿದೆ ಎಂದರು.

ಸದ್ಯ ರಾಜ್ಯಾದ್ಯಂತ, ಜಿಲ್ಲೆಯಾದ್ಯಂತ ಬರಗಾಲ ಆವರಿಸಿದ್ದು, ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರವು ಬರಗಾಲ ಘೋಷಣೆ ಈಗಾಗಲೇ ಮಾಡಿದೆ ಆದಷ್ಟು ಬೇಗ ರೈತರಿಗೆ ಪರಿಹಾರ ಸಿಗಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿ, ದೇವರು ನೆನಪು ಆಗೋದು ದುಃಖ ಆದಾಗ ಮಾತ್ರ. ತಾನು ತಾನಾಗಿಯೇ ಇರುವಂತದ್ದು ಅದು ಶಕ್ತಿ. ಜ್ಞಾನ, ಗಮ್ಯ ಗಟ್ಟಿತನದಿಂದ ದೃಢ ಚಿತ್ತ, ಭಕ್ತಿಯಿಂದ ಆರಾಧನೆ ಮಾಡಿದ್ದಲ್ಲಿ ಶಕ್ತಿ ಸನ್ನಿಹಿತ ಎಂದರು.ಹೊಸಳ್ಳಿ ಬೂದೀಶ್ವರ ಸ್ವಾಮಿಗಳು ಮಾತನಾಡಿ, ಭಾರತ ಅದ್ಭುತವಾದ ದೇಶ, ಇಲ್ಲಿ ಸಂಸ್ಕಾರವಿದೆ, ಸಂಸ್ಕೃತಿ ಇದೆ. ಮಹಿಳೆಯರಲ್ಲಿ ದೈವತ್ವವನ್ನು ಕಂಡ ದೇಶ ನಮ್ಮದು. ಆ ತಾಯಿಯ ಆಶೀರ್ವಾದ ಬಯಸಿಕೊಂಡು ಹೋಗುವ ಜನ ನಾವೆಲ್ಲ. ತಾಯಿಗೆ ಭಕ್ತಿ ಸಮರ್ಪಿಸುವ ಹಬ್ಬವೇ ವಿಜಯ ದಶಮಿಯಾಗಿದೆ. ದೇವಿ ಪುರಾಣ ಅಲ್ಲ, ದೇಹದ ಪುರಾಣವಾಗಿದೆ. ಪುರಾಣದಲ್ಲಿ ದೇವಿ ಅನೇಕ ರಕ್ಕಸರನ್ನ ಸಂಹಾರ ಮಾಡಿದಂತೆ ನಿನ್ನಲ್ಲಿರುವ ರಕ್ಕಸ ಗುಣಗಳನ್ನು ಸಂಹಾರ ಮಾಡಿದ್ದೇ ಆದಲ್ಲಿ ನಿಮ್ಮ ಜೀವನ ಸುಂದರವಾಗುತ್ತದೆ ಎಂದರು.

ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ತುಂಬಾ ಅವಶ್ಯಕವಾಗಿದೆ. ಮಕ್ಕಳು ದಾರಿ ತಪ್ಪಿದ್ದಲ್ಲಿ ನೀವು ಸಂಸ್ಕಾರ ನೀಡುವಲ್ಲಿ ತಪ್ಪಿದ್ದೀರಾ. ಮೊದಲು ನಾವು ಹೇಗೆ ಬದುಕಬೇಕು ಎಂಬುದನ್ನ ಕಲಿಯಬೇಕಾಗಿದೆ.

ಮಕ್ಕಳು ಹಿರಿಯರ ನಡೆ-ನುಡಿಯನ್ನು ನೋಡಿ ಕಲಿಯುತ್ತೇವೆ. ಗುರುಗಳು ಹೇಳಿದರೆ, ಶಿಕ್ಷಕರು ಹೇಳಿದರೆ ಕಲಿಯುವುದಿಲ್ಲ. ಆದ್ದರಿಂದ ಮನೆಯಲ್ಲಿ ಮಕ್ಕಳ ಮುಂದೆ ದುಶ್ಚಟಗಳನ್ನು ಮಾಡಬಾರದು, ನಮ್ಮ ನಡೆ-ನುಡಿ ಶುದ್ಧವಾಗಿರಬೇಕು, ಅದನ್ನು ನೋಡಿ ಮಕ್ಕಳು ಕಲಿಯುತ್ತವೆ. ಮೊಟ್ಟಮೊದಲ ಮಕ್ಕಳಿಗೆ ಬಾಗುವುದನ್ನು ಕಲಿಸಬೇಕು. ಹಿರಿಯರಿಗೆ, ಮಠಮಾನ್ಯಗಳಿಗೆ ತಂದೆ-ತಾಯಿಗಳಿಗೆ ಗೌರವ ಕೊಡುವದನ್ನು ಕಲಿಸಬೇಕು. ದುಡಿಮೆಯ ಪ್ರತಿ ಫಲಕ್ಕೂ ಪ್ರಾಮುಖ್ಯತೆ ಇದೆ. ಅಂತಃಕರಣ ಹೃದಯವನ್ನು ಬೆಸೆಯುವಂತಹ ಶಬ್ದಗಳನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.

ಈ ವೇಳೆ ಪಂಚಾಕ್ಷರಯ್ಯ ಶಾಸ್ತ್ರೀ ಮರಿದೇವರಮಠ ಅವರು ಮಂಗಲ ನುಡಿಯಾಡಿದರು.

ಹಿರಿಯರಾದ ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಗೌರಮ್ಮ ಬಡ್ನಿ, ಎನ್.ಆರ್. ದೇಶಪಾಂಡೆ, ಗ್ರಾಮ ದೇವತಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಷಣ್ಮುಖಪ್ಪ ಬಡ್ನಿ, ಉಪಾಧ್ಯಕ್ಷ ಅಶೋಕ ಸೋನಗೋಜಿ, ಇಮಣ್ಣ ಶೇಖ, ಬಸವರಾಜ ಹಾರೋಗೇರಿ, ಶಿವಲಿಂಗಪ್ಪ ಹೊರಪೇಟಿ, ಪರಸಣ್ಣಾ ಸಂಗನಪೇಟಿ, ಗಂಗಪ್ಪ ಸುಂಕಾಪುರ, ನಾಗರಾಜ ಕಮಾಜಿ ಸೇರಿದಂತೆ ಟ್ರಸ್ಟ್ ಕಮಿಟಿ ಸದಸ್ಯರು, ಭಕ್ತರು ಇದ್ದರು.

Share this article