ಮಕ್ಕಳಿಗೆ ಬಾಲ್ಯದಿಂದಲೇ ವಚನ ಸಂಸ್ಕಾರದ ಅಗತ್ಯವಿದೆ

KannadaprabhaNewsNetwork |  
Published : Feb 27, 2026, 02:15 AM IST
ವಚನ ಕಂಠಪಾಠ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭವನ್ನು ನ್ಯಾಯವಾದಿ ರವಿಬಾಬು ಪೂಜಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಭವಿಷ್ಯದ ಬದುಕನ್ನು ಸುಂದರಗೊಳಿಸಿಕೊಳ್ಳುವ ಸಾತ್ವಿಕ ಚಿಂತನೆಯನ್ನೊಳಗೊಂಡ ವಚನಗಳು ನಮ್ಮ ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿ, ಉತ್ತಮ ಭವಿಷ್ಯಕ್ಕೆ ಪ್ರೇರಣೆಯಾಗುವ ಶಕ್ತಿ ಹೊಂದಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾನಗಲ್ಲ ನಗರ ಘಟಕದ ಗೌರವಾಧ್ಯಕ್ಷ ವಕೀಲ ರವಿಬಾಬು ಪೂಜಾರ ತಿಳಿಸಿದರು.

ಹಾನಗಲ್ಲ: ಭವಿಷ್ಯದ ಬದುಕನ್ನು ಸುಂದರಗೊಳಿಸಿಕೊಳ್ಳುವ ಸಾತ್ವಿಕ ಚಿಂತನೆಯನ್ನೊಳಗೊಂಡ ವಚನಗಳು ನಮ್ಮ ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿ, ಉತ್ತಮ ಭವಿಷ್ಯಕ್ಕೆ ಪ್ರೇರಣೆಯಾಗುವ ಶಕ್ತಿ ಹೊಂದಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾನಗಲ್ಲ ನಗರ ಘಟಕದ ಗೌರವಾಧ್ಯಕ್ಷ ವಕೀಲ ರವಿಬಾಬು ಪೂಜಾರ ತಿಳಿಸಿದರು. ಹಾನಗಲ್ಲ ತಾಲೂಕಿನ ಅರಳೇಶ್ವರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುತ್ತೂರು ಜಗದ್ಗುರು ಶ್ರೀ ಈಶಾನೇಶ್ವರ ಒಡೆಯರ್ ಶ್ರೀಗಳು, ಶ್ರೀ ನಿಜಲಿಂಗ ಶಿವಾಚಾರ್ಯರು ಹಾಗೂ ಪುಟ್ಟಮ್ಮ ಶಿವನಗೌಡರ ಬಸನಗೌಡರ ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ವಿದ್ಯಾರ್ಥಿಗಳಿಗಾಗಿ ವಚನ ಕಂಠ ಪಾಠ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಹೆಸರಿನಲ್ಲಿ ಕೇವಲ ಹಣ ಮಾಡುವ ಮಾರ್ಗದರ್ಶನ ದೊರೆಯುತ್ತಿದೆ. ನಮ್ಮ ಕುಟುಂಬಗಳು ಪ್ರೀತಿ ಸ್ನೇಹದಿಂದ ದೂರವಾಗುತ್ತಿವೆ. ಧರ್ಮ ಸಂಸ್ಕಾರಗಳು ಟೀಕೆಯ ವಿಷಯಗಳಾಗುತ್ತಿವೆ. ಇದಕ್ಕೆಲ್ಲ ತೆರೆ ಎಳೆಯಲು ವಚನ ಸಾಹಿತ್ಯ ಒಳ್ಳೆಯ ಪಾಠ. ಮಕ್ಕಳಿಗೆ ಬಾಲ್ಯದಿಂದಲೇ ವಚನ ಸಂಸ್ಕಾರದ ಅಗತ್ಯವಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಡಾ.ಎಂ.ಪ್ರಸನ್ನಕುಮಾರ, ಇದು ವಿಜ್ಞಾನ ಯುಗ. ಆದರೆ ಕೇವಲ ವಿಜ್ಞಾನದಿಂದ ನೆಮ್ಮದಿ ಸಾಧ್ಯವಿಲ್ಲ. ಉತ್ತಮ ಸಂಸ್ಕಾರದಿಂದ ಮಾತ್ರ ನೆಮ್ಮದಿ ಸಾಧ್ಯ. ಇಂತಹ ನೆಮ್ಮದಿಗೆ ಉತ್ತಮವಾದುದನ್ನು ಓದುವ, ಅದನ್ನು ಬದುಕಿಗೆ ಅನುಸರಿಸಿಕೊಳ್ಳುವ ಕೆಲಸ ಆಗಬೇಕು. ಇದಕ್ಕಾಗಿ ನಮ್ಮ ಮನೆಗಳು ನಿಜವಾದ ಸಂಸ್ಕಾರ ಕೇಂದ್ರಗಳೇ ಆಗಬೇಕಿದೆ. ಇದಕ್ಕಾಗಿ ಅತ್ಯಂತ ಸರಳವಾದ ವಚನ ಸಾಹಿತ್ಯ ನಮ್ಮ ಮಕ್ಕಳಿಗೆ ಸುಲಭವಾಗಿ ದೊರೆತು ಉತ್ತಮ ಜೀವನಕ್ಕೆ ಮಾರ್ಗದರ್ಶನವಾಗಲಿ ಎಂದರು. ಜಿಲ್ಲಾಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಶಾಲೆಗಳು ಮಕ್ಕಳ ಮನಸ್ಸನ್ನು ಹೃದ್ಯವಾಗಿ ಸಂಸ್ಕಾರಗೊಳಿಸುವ ಶ್ರದ್ಧಾ ಕೇಂದ್ರಗಳು. ಇಂದಿನ ಜಗತ್ತಿನ ಓಟಕ್ಕೆ ಬೇಕಾಗುವ ಜ್ಞಾನ ಇರಲಿ. ಆದರೆ ಇಂದಿನ ಮೊಬೈಲ್, ಟಿವಿಗಳಲ್ಲಿ ಮುಳುಗಿ ಬದುಕು ದಿಕ್ಕು ತಪ್ಪದಂತಿರಲಿ ಎಂಬ ಎಚ್ಚರಿಕೆ ಪಾಲಕರಿಗೆ ಬೇಕಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ಸಂದೇಶ ಹೇಳುವ ವಚನಗಳು ಈಗಂತೂ ಮಕ್ಕಳ ಪಾಲಿಗೆ ಉತ್ತಮ ಮಾರ್ಗದರ್ಶಿ ಸೂತ್ರಗಳು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವಿದ್ಯಾಡಂಬಳಪ್ಪನವರ ಅಧ್ಯಕ್ಷತೆವಹಿಸಿದ್ದರು. ಮುಖ್ಯೋಪಾಧ್ಯಾಯ ವಾಯ್.ಡಿ.ಹೊಸಮನಿ ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಕ ಎಸ್.ವಿ. ಹೊಸಮನಿ, ಸುಸ್ಮಿತಾ ಹೀರೂರ ಅತಿಥಿಗಳಾಗಿದ್ದರು. ಬಹುಮಾನ: ವಚನ ಕಂಠಪಾಠ ಸ್ಪರ್ಧೆಯಲ್ಲಿ ನಿಖಿತಾ ಚಿಕ್ಕೇರಿ ಪ್ರಥಮ ಬಹುಮಾನ ಪಡೆದರು. ಈಶ್ವರಿ ಬಿಡೇದ (ದ್ವಿತೀಯ), ನಂದಿತಾ ತವರಿ (ತೃತೀಯ) ಬಹುಮಾನ ಪಡೆದರು. ಸ್ಪರ್ಧೆಯಲ್ಲಿ 112 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಹೋಳಿ ಆಚರಣೆಗೆ ಹಲವು ಕಾರ್ಯಕ್ರಮ
ಪರಿಸರ ಕಾಪಾಡುವಲ್ಲಿ ವಿಫಲವಾಗಿದ್ದಕ್ಕೆ ಭೂಕುಸಿತ, ಪ್ರವಾಹ