- ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಬಾಲ ಭವನ ಸಮಿತಿ, ಸಿ.ಡಿ.ಪಿ.ಓ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕಾರ್ಯಕ್ರಮ
5 ರಿಂದ 16 ವರ್ಷದೊಳಗಿನ ಮಕ್ಕಳ ಪ್ರತಿಭೆ ಗುರುತಿಸಿ ಅನಾವರಣಗೊಳಿಸುವುದೇ ಕಲಾ ಪ್ರತಿಭೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೇಲ್ವೀಚಾರಕಿ ಕಾವ್ಯಶ್ರೀ ತಿಳಿಸಿದರು.
ಸೋಮವಾರ ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮತ್ತು ತಾಲೂಕು ಬಾಲ ಭವನ ಸಮಿತಿ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿ ತಿಂಗಳು ಒಂದು ಶಾಲೆಯನ್ನು ಗುರುತಿಸಿ ಮಕ್ಕಳಿಗೆ ಸ್ಪರ್ಧೆ ನಡೆಸಲಾಗುವುದು ಎಂದರು.ಅತಿಥಿಯಾಗಿದ್ದ ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸ್ಪರ್ಧಾ ತ್ಮಕ ಮನೋಭಾವ ಬೆಳೆಸಬೇಕು.ಸರ್ಕಾರ ಮಕ್ಕಳ ಕಲಾ ಪ್ರತಿಭೆ ಹಮ್ಮಿಕೊಂಡಿರುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ. ಮಕ್ಕಳು ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ ಮಾತನಾಡಿ, ಮಕ್ಕಳಿಗೆ ಸ್ಪರ್ಧೆ ಏರ್ಪಡಿಸು ವುದರಿಂದ ಮಕ್ಕಳಲ್ಲಿ ಬೌದ್ದಿಕ ಹಾಗೂ ಕ್ರೀಡಾ ಸಾಮಾರ್ಥ್ಯ ಹೆಚ್ಚಾಗಲಿದೆ. ಮಕ್ಕಳಿಗೆ ನಾಲ್ಕು ಗೋಡೆಗಳ ಮದ್ಯೆ ನಡೆಯುವ ಪಾಠದ ಜೊತೆಗೆ ಇಂತಹ ಪಠ್ಯೇತರ ಚಟುವಟಿಗೆ ಅಗತ್ಯವಾಗಿದೆ ಎಂದರು.ಗ್ರಾಪಂ ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಸೋಲು ಹಾಗೂ ಗೆಲುವನ್ನು ಸಮಚಿತ್ತದಿಂದ ಸ್ವೀಕಾರ ಮಾಡಬೇಕು ಎಂದರು. ಸಭೆಯಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯಿನಿ ರಾಧಾ ಮಣಿ, ಸಹ ಶಿಕ್ಷಕರಾದ ಅರುಣ ಕುಮಾರ್, ಮಲ್ಲಿಕಾರ್ಜುನ, ಶುಭ, ಗಾಯಿತ್ರಿ, ಅಂಗನವಾಡಿ ಕಾರ್ಯಕರ್ತೆ ಗಾಯಿತ್ರಿ, ಸಬೀನಾ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.