ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಸಿತ

KannadaprabhaNewsNetwork | Published : Mar 19, 2025 12:31 AM

ಸಾರಾಂಶ

ಸರ್ಕಾರಿ ಶಾಲೆಗಳನ್ನು ಸಮಾಜಕ್ಕೆ ಮಾದರಿಯನ್ನಾಗಿಸುವಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರ ಸಹಕಾರ ಅಗತ್ಯ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಿಕೊಡುವ ಕೆಲಸ ಶಿಕ್ಷಕರಿಂದ ಆಗಬೇಕು ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಬೆಳೆಸಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚು ಆಯೋಜಿಸಬೇಕು

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಇತ್ತೀಚಿನ ದಿನಗಳಲ್ಲಿ ಪೋಷಕರ ಆಂಗ್ಲ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಸ್ಥಳೀಯ ನಗರ ಸಭೆಯ ಪ್ರಭಾರಿ ಪೌರಾಯುಕ್ತ ಮೋಹನ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾವಣೆ ಸಿದ್ಧಾರ್ಥ ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಅಧಿಕವಾಗುತ್ತಿದೆ ಎಂದರು.

ಮಾದರಿ ಶಾಲೆಗಳಾಗಬೇಕು

ಸರ್ಕಾರಿ ಶಾಲೆಗಳನ್ನು ಸಮಾಜಕ್ಕೆ ಮಾದರಿಯನ್ನಾಗಿಸುವಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರ ಸಹಕಾರ ಅಗತ್ಯ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಿಕೊಡುವ ಕೆಲಸ ಶಿಕ್ಷಕರಿಂದ ಆಗಬೇಕು ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಬೆಳೆಸಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚು ಆಯೋಜಿಸಬೇಕು ಎಂದು ಹೇಳಿದರು.

ಸಾಮಾನ್ಯವಾಗಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ಖಾಸಗಿ ಶಾಲೆಗಳು ಆದ್ದೂರಿಯಾಗಿ ಆಚರಣೆ ಮಾಡುತ್ತವೆ. ನಗರದ ಬಡಾವಣೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರು, ಮಕ್ಕಳು ಪೋಷಕರು ಹಾಗೂ ಎಸ್ ಡಿ ಎಮ್ ಸಿ ಸಹಕಾರ ಪಡೆದು ಆದ್ದೂರಿಯಾಗಿ ಶಾಲಾ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಕ್ಕಳಿಂದ ರಸಮಂಜರಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಗಂಗರಾಜು ಮಾತನಾಡಿದರು. ಶಾಲಾ ಮಕ್ಕಳಿಂದ ಹಮ್ಮಿಕೊಂಡಿದ್ದ ವಿವಿಧ ನೃತ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದವು. ಮಕ್ಕಳ ರಸಮಂಜರಿ ಕಾರ್ಯಕ್ರಮ ಸಾರ್ವಜನಿಕರನ್ನು ರಂಜಿಸಿದವು.

ಈ ಸಂದರ್ಭದಲ್ಲಿ ಸಿಆರ್‌ಪಿ ಬಾಬು, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಮಂಜುಳಮ್ಮ, ನಗರ ಸಭೆ ಸದಸ್ಯ ಎನ್ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ಮೊಹಮ್ಮದ್ ಹುಸೇನ್, ಶಿಕ್ಷಕರಾದ ನಗೀನ,ಅನುಜಾ ಸೇರಿದಂತೆ ಶಾಲಾ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

Share this article