ಹಾನಗಲ್ಲ ಗ್ರಾಮದೇವಿ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಲು ಸಹಕರಿಸಿ: ಪರಶುರಾಮ

KannadaprabhaNewsNetwork | Published : Mar 19, 2025 12:31 AM

ಸಾರಾಂಶ

ಹಬ್ಬಕ್ಕಾಗಿ ಬರುತ್ತಿರುವ ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಸುರಕ್ಷತೆ, ವಾಹನಗಳಿಗಾಗಿ ಏಕಮುಖ ರಸ್ತೆ, ಜಾತ್ರಾ ಸ್ಥಳದಲ್ಲಿ ತಾತ್ಕಾಲಿಕ ಡಸ್ಟ್‌ಬಿನ್, ಸ್ವಚ್ಛತಾ ಅರಿವು ಕಾರ್ಯಕ್ರಮ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲವೂ ಸಿದ್ಧತೆಯೊಂದಿಗೆ ಪೂರ್ಣಗೊಳಿಸಲಾಗಿದೆ.

ಹಾನಗಲ್ಲ: ನಮ್ಮೂರ ಧಾರ್ಮಿಕ ವಿಶೇಷತೆಯ ಗ್ರಾಮದೇವಿ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಲು ಪುರಸಭೆ, ತಾಲೂಕು ಆಡಳಿತ, ಜಾತ್ರಾ ಸಮಿತಿ ಅವಿರತ ಶ್ರಮಿಸಿದ್ದು, ಅತ್ಯಂತ ಸುವ್ಯವಸ್ಥಿತ ಹಬ್ಬವಾಗಿ ಹೊರಹೊಮ್ಮಲು ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯ ಎಂದು ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ ಮನವಿ ಮಾಡಿದರು.

ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಗ್ರಾಮದೇವಿ ಜಾತ್ರಾ ಸಿದ್ಧತೆ ಕುರಿತು ಮಾತನಾಡಿ, ನಮ್ಮೂರ ಅಧಿದೇವತೆಯ ಹಬ್ಬ ನಾಲ್ಕು ವರ್ಷಕ್ಕೊಮ್ಮೆ ಅತ್ಯಂತ ಭಕ್ತಿ ಭಾವದಿಂದ ನಡೆಯುತ್ತದೆ. ಇದಕ್ಕಾಗಿ ಹಾನಗಲ್ಲ ಪುರಸಭೆ ತನ್ನ ಪಾಲಿನ ಎಲ್ಲ ಕರ್ತವ್ಯಗಳನ್ನು ನಿರ್ವಹಿಸಿದ್ದು, ಸಾರ್ವಜನಿಕರ ಹಿತಕ್ಕಾಗಿ ಊರಿನ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪ, ಶೌಚಾಲಯ ನಿರ್ಮಾಣ ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರ ಭಕ್ತಿ ಶ್ರದ್ಧೆಗೆ ಅನುಕೂಲ ಮಾಡಿಕೊಡಲು ಹರಸಾಹಸ ಮಾಡಿದೆ. ಪುರಸಭೆಯ ಎಲ್ಲ ಸಿಬ್ಬಂದಿ ದಿನವಿಡೀ ಕೆಲಸ ಮಾಡಿ ನಮ್ಮೂರ ಹಬ್ಬದ ಹಿರಿಮೆಗೆ ಶ್ರಮಿಸಿದ್ದಾರೆ ಎಂದರು.

ಹಬ್ಬಕ್ಕಾಗಿ ಬರುತ್ತಿರುವ ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಸುರಕ್ಷತೆ, ವಾಹನಗಳಿಗಾಗಿ ಏಕಮುಖ ರಸ್ತೆ, ಜಾತ್ರಾ ಸ್ಥಳದಲ್ಲಿ ತಾತ್ಕಾಲಿಕ ಡಸ್ಟ್‌ಬಿನ್, ಸ್ವಚ್ಛತಾ ಅರಿವು ಕಾರ್ಯಕ್ರಮ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲವೂ ಸಿದ್ಧತೆಯೊಂದಿಗೆ ಪೂರ್ಣಗೊಳಿಸಲಾಗಿದೆ. ಎಲ್ಲ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಜಾತ್ರೆ ಮುಗಿಯುವವರೆಗೆ ಎಲ್ಲ ಕಾರ್ಯಗಳನ್ನು ನಿಗಾ ವಹಿಸಿ ಮಾಡುತ್ತಿದ್ದಾರೆ. ಊರಿನ ಅಲಂಕಾರದಲ್ಲಿಯೂ ಎಲ್ಲ ಸಹಕಾರವನ್ನು ಜಾತ್ರಾ ಸಮಿತಿಗೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮೂರ ಹಬ್ಬಕ್ಕೆ ಬರುತ್ತಿರುವ ಲಕ್ಷಾಂತರ ಭಕ್ತರು ಕೂಡ ಜಾತ್ರೆಯ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಕಿರಿಯ ಅಭಿಯಂತರ ನಾಗರಾಜ ಮಿರ್ಜಿ, ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಪುರಸಭೆ ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ, ಗುರುರಾಜ ನಿಂಗೋಜಿ, ನಾಮನಿರ್ದೇಶಿತ ಸದಸ್ಯ ಮಾಲತೇಶ ಕಾಳೇರ ಸುದ್ದಿಗೋಷ್ಠಿಯಲ್ಲಿದ್ದರು.ಯೋಗಿನಾರೇಯಣರ ಆದರ್ಶ ಅಳವಡಿಸಿಕೊಳ್ಳಿ

ಹಾವೇರಿ: ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಬಲಿಜ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಯೋಗಿನಾರೇಯಣ ಯತೀಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಹಿರಿಯ ತತ್ವಜ್ಞಾನಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳುವತ್ತ ಮುನ್ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹಾಗೂ ಸಮಾಜದ ಮುಖಂಡ, ಎನ್.ಎಚ್. ಮಕರಿ ಅವರು ಯೋಗಿನಾರೇಯಣ ಯತೀಂದ್ರರ ಕೈವಾರ ತಾತಯ್ಯನವರ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ ತಹಶೀಲ್ದಾರ್, ಬಿಇಡಿ ಕಾಲೇಜು ಪ್ರಾಚಾರ್ಯ ಡಾ. ಬಸನಗೌಡ್ರ, ಬಸವರಾಜ, ದೇವರಾಜ್ ನಾಯ್ಡು, ಧರ್ಮಣ್ಣ, ರಾಜಶೇಖರ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Share this article