ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಕಂದಾಯ ಇಲಾಖೆ ಅಭಿಲೇಖಾಲಯದಲ್ಲಿ (ರೆಕಾರ್ಡ್ ರೂಂ) ಖಾಸಗಿ ವ್ಯಕ್ತಿ ಸರ್ಕಾರಿ ನೌಕರನಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ, ಖಾಸಗಿ ವ್ಯಕ್ತಿಯೊಬ್ಬ ಸರ್ಕಾರಿ ಕಚೇರಿಯಲ್ಲಿ ನೌಕರನಂತೆ ರಾಜಾರೋಷವಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿ ಸೂಕ್ತ ಕ್ರಮಕ್ಕಾಗಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ಮನವಿ ಮಾಡಿದೆ.ಕಂದಾಯ ಇಲಾಖೆ ರೆಕಾರ್ಡ್ ರೂಂ ಅತೀ ಮಹತ್ವದ್ದು. ತಾಲೂಕಿನ ರೈತರ ನೂರಾರು ವರ್ಷಗಳ ಭೂ ದಾಖಲೆಗಳು ಸಂರಕ್ಷಿತವಾಗಿವೆ. ರೆಕಾರ್ಡ್ ರೂಂ ನ ಸೂಕ್ಷ್ಮತೆ ಅರಿತಿರುವ ತಹಸೀಲ್ದಾರರು ರೆಕಾರ್ಡ್ ರೂಂ ಬಾಗಿಲಿನಲ್ಲಿರುವ ಅಭಿಲೇಖಾಲಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೂ ಹಾಗೂ ಗ್ರಾಮ ಸಹಾಯಕರಿಗೂ ಪ್ರವೇಶಕ್ಕೆ ಅವಕಾಶವಿಲ್ಲ ಎಂಬುದನ್ನು ತಿಳಿಸಬೇಕು.
ತುರ್ತು ಸಂದರ್ಭದಲ್ಲಿ ಮಾತ್ರ ಕಡ್ಡಾಯವಾಗಿ ತಹಸೀಲ್ದಾರ್ ಅವರ ಅನುಮತಿ ಪಡೆದು ಅಭಿಲೇಕಾಲಯಕ್ಕೆ ಪ್ರವೇಶಿಸಬಹುದು ಎನ್ನುವ ಆದೇಶದ ಪ್ರತಿಯನ್ನು ಅಂಟಿಸಿದ್ದಾರೆ. ಗ್ರಾಮ ಲೆಕ್ಕಿಗರಿಗೂ ಪ್ರವೇಶ ನಿರಾಕರಿಸಲ್ಪಟ್ಟಿರುವ ಕಂದಾಯ ಇಲಾಖೆ ಅಭಿಲೇಖಾಲಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯ ಕೊಟ್ರೇಶ್ ಎನ್ನುವ ವ್ಯಕ್ತಿ ಯಾವುದೇ ಅಡೆತಡೆಯಿಲ್ಲದೆ ಬೇನಾಮಿಯಾಗಿ ಕೆಲಸ ಮಾಡುತ್ತಿದ್ದಾನೆ.ಈತನ ಪತ್ನಿ ಕಂದಾಯ ಇಲಾಖೆ ಭೂಮಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪತಿ ಬೇನಾಮಿ ನೌಕರನಾಗಿ ರೆಕಾರ್ಡ್‌ನಲ್ಲಿ ರೈತರ ಸುಲಿಗೆ ಮಾಡುತ್ತಿದ್ದಾನೆ ಎಂದು ತಿಳಿಸಿ, ರೆಕಾರ್ಡ್ ರೂಂಗೆ ತಹಸೀಲ್ದಾರರನ್ನು ಕರೆಸಿಕೊಂಡ ರೈತ ಮುಖಂಡರು ಖಾಸಗಿ ವ್ಯಕ್ತಿ ಕೆಲಸ ಮಾಡುತ್ತಿರುವ ಬಗ್ಗೆ ಗಮನಕ್ಕೆ ತಂದರು.
ಸರ್ಕಾರದಿಂದ ನೇಮಕಾತಿಯಾಗದೆ ಬೇನಾಮಿಯಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ವಿರುದ್ಧ ಮತ್ತು ಆತನನ್ನು ಒಳಗೆ ಬಿಟ್ಟುಕೊಂಡು ಕೆಲಸದ ಜವಾಬ್ದಾರಿ ವಹಿಸಿರುವ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು. ತಮ್ಮ ಗಮನಕ್ಕೆ ಬರದಂತೆ ಬೇನಾಮಿ ವ್ಯಕ್ತಿ ಇಲ್ಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ವಿಚಾರಣೆಗೆ ಒಳಪಡಿಸುವುದಾಗಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ರೈತ ಮುಖಂಡರಿಗೆ ಭರವಸೆ ನೀಡಿದರು.