ಪ್ರಾಥಮಿಕ, ಪೌಢಶಾಲೆ ಉರ್ದು ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರ
ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಆಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಹೇಳಿದರು.
ಮುಸ್ಲಿಂ ಎಜುಕೇಷನಲ್ ಅಂಡ್ ಎಂಪರ್ಮೆಂಟ್ ಟ್ರಸ್ಟ್ ವತಿಯಿಂದ ಜಿಲ್ಲೆಯ ಆರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಉರ್ದು ಶಿಕ್ಷಕರಿಗೆ ಅಹಮದ್ ಪ್ಯಾಲೇಸ್‍ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.ಕಳೆದ ಐದಾರು ವರ್ಷಗಳಿಂದ ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಇದರಿಂದ ಶಿಕ್ಷಕರ ಸಂಖ್ಯೆಯೂ ಸಹಜವಾಗಿ ಕಡಿತಗೊಳ್ಳುತ್ತದೆ. 2010ರಲ್ಲಿ ಜಿಲ್ಲೆಯಲ್ಲಿ ಐದು ನೂರಕ್ಕೂ ಹೆಚ್ಚು ಉರ್ದು ಶಿಕ್ಷಕರಿದ್ದರು. ಏಕೆ ಕಡಿಮೆಯಾಗಿದೆ ಎನ್ನುವುದರ ಚಿಂತನವಾಗಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ ಮಕ್ಕಳು ಶೈಕ್ಷಣಿಕವಾಗಿ ಬದಲಾವಣೆಯಾಗಬೇಕಿದೆ ಎಂದು ಹೇಳಿದರು.
ಡಿಡಿಪಿಐ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಮೂದಲಿಸಿ ಅವಮಾನಿಸುವ ಬದಲು ಓದಲು ಪ್ರೇರೇಪಿಸಿಬೇಕು. ಉರ್ದು ಮಾಧ್ಯಮದಲ್ಲಿ ಫಲಿತಾಂಶ ಸುಧಾರಣೆ ಆಗಬೇಕಾಗಿರುವುದರಿಂದ ಮಕ್ಕಳ ಮನಸ್ಸಿಗೆ ನಾಟುವಂತೆ ಬೋಧಿಸಿ ಮನೋಸ್ಥೈರ್ಯ ತುಂಬುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ನಿಧಾನಗತಿಯಲ್ಲಿ ಕಲಿಯುವ ಮಕ್ಕಳ ಪಟ್ಟಿ ಮಾಡಿ ಯಾವ ವಿಷಯದ ಕಲಿಕೆಯಲ್ಲಿ ಹಿಂದಿದ್ದಾರೆನ್ನುವುದನ್ನು ಗಮನಿಸಿ ಸರ್ವತೋಮುಖ ಬೆಳವಣಿಗೆಗೆ ಉರ್ದು ಶಿಕ್ಷಕರು ಶ್ರಮಿಸಬೇಕು. ಯಾವುದೇ ಭಾಷೆಯನ್ನಾಗಲಿ ಸರಳವಾಗಿ ಕಲಿಸಿ. ಕೂಡುವುದು, ಕಳೆಯುವುದು, ಭಾಗಿಸುವುದು ಸರಿಯಾಗಿ ಬರಬೇಕು. ಅದಕ್ಕಾಗಿ ಮಕ್ಕಳಿಗೆ ಪ್ರತಿನಿತ್ಯವು ಡ್ರಿಲ್ಲಿಂಗ್ ಮಾಡಬೇಕು. ತರಗತಿಯಲ್ಲಿ ಮಕ್ಕಳನ್ನು ಬೈಯುವ ಬದಲು ಪ್ರೋತ್ಸಾಹಿಸಿ ಶಿಕ್ಷಣದ ಕಡೆ ಆಸಕ್ತಿ ಮೂಡುವಂತೆ ನೋಡಿಕೊಳ್ಳಿ ಎಂದರು.
ನಿವೃತ್ತ ಡಿವೈಎಸ್ಪಿ ಅಬ್ದುಲ್‍ರೆಹಮಾನ್, ನಿವೃತ್ತ ಸಬ್ ಇನ್‌ಸ್ಪೆಕ್ಟರ್ ನಾಗರಾಜ್, ಉರ್ದು ಇಸಿಓ. ಸಮೀರ, ಶಬ್ಬೀರ್ ಅಹಮದ್ ಇದ್ದರು.