ಮಣಿಪಾಲ ಆರೋಗ್ಯ ಕಾರ್ಡ್‌ 2025 ನೋಂದಣಿ ಆರಂಭ

KannadaprabhaNewsNetwork |  
Published : Jun 19, 2025, 12:34 AM ISTUpdated : Jun 19, 2025, 12:35 AM IST
18ಕಾರ್ಡ್‌ | Kannada Prabha

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭಿಸಿದೆ.

ಸುಲಭ ದರದಲ್ಲಿ ಆರೋಗ್ಯ ಸೇವೆ ನೀಡುವುದಕ್ಕೆ 2000ರಲ್ಲಿ ಆರಂಭ । ಯೋಜನೆಗೆ 25 ವರ್ಷ ಪೂರ್ಣ

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭಿಸಿದೆ.

ಈ ನೋಂದಣಿಗೆ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಂಗಳವಾರ ಅಧಿಕೃತ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಸುಲಭ ದರದಲ್ಲಿ ಆರೋಗ್ಯ ನೀಡುವ ಧ್ಯೇಯದೊಂದಿಗೆ ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಮಾರ್ಗದರ್ಶನದಲ್ಲಿ 2000ರಲ್ಲಿ ಪ್ರಾರಂಭಿಸಲಾದ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆ ಈಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. ಈ ಯೋಜನೆಯು 25 ವರ್ಷಗಳಲ್ಲಿ ಕೋಟ್ಯಂತರ ಫಲಾನುಭವಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡಿದೆ ಎಂದರು.

2000ನೇ ಸಾಲಿನಲ್ಲಿ 3,200 ಕುಟುಂಬಗಳ ಸದಸ್ಯತ್ವದೊಂದಿಗೆ ಆರಂಭವಾದ ಈ ಯೋಜನೆಯಡಿ ಕಳೆದ ವರ್ಷ 1.25 ಲಕ್ಷ ಕುಟುಂಬಗಳು ನೋಂದಾಯಿಸಿದ್ದು, 6.72 ಲಕ್ಷ ಸದಸ್ಯರು ಲಾಭ ಪಡೆದುಕೊಂಡಿದ್ದಾರೆ. ಈ ಕಾರ್ಡ್‌ದಾರರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರು ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆಗಳು, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ, ಗೋವಾದ ಮಣಿಪಾಲ ಆಸ್ಪತ್ರೆ ಮತ್ತು ಮಣಿಪಾಲ ಮತ್ತು ಮಂಗಳೂರಿನ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು ಎಂದರು.

ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್, ಈ ವರ್ಷ ಈ ಯೋಜನೆಯ ಹೆಚ್ಚುವರಿ ಸೌಲಭ್ಯಗಳಾಗಿ 1 ಮತ್ತು 2 ವರ್ಷಗಳ ಸದಸ್ಯತ್ವ ಆಯ್ಕೆಗಳಿವೆ. ಸಮಾಜದ ಎಲ್ಲಾ ವರ್ಗಗಳಿಗೆ ಕೈಗೆಟುಕುವಂತೆ ಶುಲ್ಕವನ್ನು ವಿಧಿಸಲಾಗಿದೆ ಎಂದರು.

ಮಾಹೆಯ ಸಹ ಉಪಕುಲಪತಿ ಡಾ. ಶರತ್ ಕೆ. ರಾವ್, 2025 ರ ಮೊದಲ ಮಣಿಪಾಲ ಕಾರ್ಡನ್ನು ಹಸ್ತಾಂತರಿಸಿದರು. ಕೆಎಂಸಿ ಡೀನ್ ಡಾ.ಅನಿಲ್ ಕೆ. ಭಟ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣುಗೋಪಾಲ್ ಇದ್ದರು.

ಸದಸ್ಯತ್ವ ವಿವರಗಳು:

ಒಂದು ವರ್ಷದ ಕಾರ್ಡಿಗೆ ಒಬ್ಬರಿಗೆ 350 ರು., ಕೌಟುಂಬಿಕ (ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು) ಕಾರ್ಡಿಗೆ 700 ರು. ಮತ್ತು ಕುಟುಂಬ ಪ್ಲಸ್ (ಕಾರ್ಡುದಾರ, ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು) ಕಾರ್ಡಿಗೆ 900 ರು. ಸದಸ್ಯತ್ವವಿದೆ. ಇದು 2 ವರ್ಷದ ಯೋಜನೆಯಲ್ಲಿ ಕ್ರಮವಾಗಿ 600 ರು., 950 ರು. ಮತ್ತು 1100 ರು, ಆಗಿರುತ್ತದೆ. ಕಾರ್ಡಿನ ಸೌಲಭ್ಯಗಳು:

ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ಸಮಾಲೋಚನೆ ಶುಲ್ಕಗಳಲ್ಲಿ ಶೇ 50, ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ 25, ರೇಡಿಯಾಲಜಿ, ಓಪಿಡಿ ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ 20, ಡಯಾಲಿಸಿಸ್‌ನಲ್ಲಿ ಶೇ 100, ಆಸ್ಪತ್ರೆ ಔಷಧಿಗಳಲ್ಲಿ ಶೇ 10, ಸಾಮಾನ್ಯ ವಾರ್ಡ್ ಒಳರೋಗಿಗಳ ಬಿಲ್‌ಗಳಲ್ಲಿ ಶೇ 25 ರಿಯಾಯಿತಿ ನೀಡಲಾಗುತ್ತದೆ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ