ಬೀದರ್ ಚಾಮರಾಜನಗರ ಎನ್‌ಎಚ್ ಬಳಿ ನಿರ್ಮಾಣ । ಕಾರ್ಯಾರಂಭವಿಲ್ಲದೆ ಶಿಥಿಲಾವಸ್ಥೆಗೆ ಕಟ್ಟಡ
ಬಿಜಿಕೆರೆ ಬಸವರಾಜ
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರುಬರದ ನಾಡನ್ನು ಸೀಳಿಕೊಂಡು ಸಾಗಿರುವ ಬೀದರ್ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಬದಿಯ ಬಸವೇಶ್ವರ ನಗರದ ಬಳಿಯಲ್ಲಿ ಸದಾ ವಾಹನಗಳಿಂದ ಕಿಕ್ಕಿರಿದು ತುಂಬಿ ಉದ್ಯೋಗ ಸೃಷ್ಟಿಯಾಗಬೇಕಿದ್ದ ವಿಶ್ರಾಂತಿ ತಂಗುದಾಣ (ರೆಸ್ಟ್ ಏರಿಯಾ) ನಿರ್ಮಾಣವಾಗಿ ವರ್ಷಗಳೇ ಕಳೆದರೂ ಕಾರ್ಯಾರಂಭವಿಲ್ಲದೆ ಅಲ್ಲಿನ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪುತ್ತಿವೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯದ ನಡೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ವಿಶ್ರಾಂತಿ ತಂಗುದಾಣದಲ್ಲಿ ಹತ್ತಾರು ಸೌಲಬ್ಯಗಳು ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಸ್ಯಹಾರಿ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಹೋಟೆಲ್ ಕಟ್ಟಡಗಳು ಇವೆ. ಕಟ್ಟಡದ ಆವರಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ನೂರಾರು ಕಿ.ಮೀ. ಪ್ರಯಾಣ ಮಾಡುವ ಚಾಲಕ ಮತ್ತು ಸಾರ್ವಜನಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ನೂರಾರು ಬಸ್ಸು. ಲಾರಿ. ಕಾರು ಸೇರಿದಂತೆ ವಿವಿಧ ವಾಹನಗಳನ್ನು ಪಾರ್ಕಿಂಗ್ ಮಾಡಲು ವಿಶಾಲವಾದ ಆವರಣ ಇದ್ದರೂ ಒಮ್ಮೆಯೂ ವಾಹನಗಳು ಇತ್ತ ಸುಳಿದಿಲ್ಲ.
ಹೆದ್ದಾರಿ ಪ್ರಾಧಿಕಾರವು ಕೋಟ್ಯಂತರ ಹಣ ಖರ್ಚು ಮಾಡಿ ಕಟ್ಟಿದ ವಿಶ್ರಾಂತಿ ತಂಗುದಾಣದಲ್ಲಿನ ಕಟ್ಟಡಗಳು ಉದ್ದೇಶಿತ ಯೋಜನೆಗೆ ಬಳಕೆಯಾಗದೆ ನಾಲ್ಕೈದು ವರ್ಷಗಳಿಂದ ಉದ್ಘಾಟನೆ ಬಾಗ್ಯ ಕಾಣದೆ ಕಟ್ಟಡವೂ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪುವತ್ತ ಸಾಗಿದೆ.
ಹೆದ್ದಾರಿ ಬಳಿಯಲ್ಲಿ ನಿರ್ಮಿಸಿರುವ ವಿಶ್ರಾಂತಿ ತಂಗುದಾಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ. ಸಂಬಂಧಿಸಿದ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸುತ್ತೇನೆ.
150ಎ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಸವೇಶ್ವರ ನಗರ ಬದಿಯಲ್ಲಿ ನಿರ್ಮಿಸಿರುವ ವಿಶ್ರಾಂತಿ ತಂಗುದಾಣ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಪರಿಣಾಮವಾಗಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿ ಆಗಬೇಕಾಗಿದ್ದ ಸ್ಥಳ ಈಗ ಉಪಯೋಗವಾಗವಿಲ್ಲದಾಗಿದೆ. ಸಂಬಂದಿಸಿದ ಅಧಿಕಾರಿಗಳು ಆದಷ್ಟು ಶೀಘ್ರಗಿದನ್ನು ಸಾರ್ವಜನಿಕ ಸೇವೆಗೆ ನೀಡಬೇಕು.