ವಿಜಯಪುರ: ಮಕ್ಕಳಿಗೆ ಬಾಲ್ಯದಿಂದಲೇ ವ್ಯವಹಾರಿಕ ಲೋಕಜ್ಞಾನ ಮತ್ತು ಹಣದ ಮೌಲ್ಯ ತಿಳಿಸಿಕೊಡುವುದು ಇಂದಿನ ಅಗತ್ಯ. ಇಂತಹ ಚಟುವಟಿಕೆಗಳಿಂದ ಮಕ್ಕಳು ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಅಭಿಪ್ರಾಯಪಟ್ಟರು.
ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ಇಲ್ಲಿನ ಮಕ್ಕಳು ಗ್ರಾಹಕರನ್ನು ಮನವೊಲಿಸುವ ರೀತಿ ಮತ್ತು ಚೌಕಾಶಿ ಮಾಡುವಲ್ಲಿ ತೋರುತ್ತಿರುವ ಬುದ್ಧಿವಂತಿಕೆ ನೋಡಿದರೆ ಯಾವುದೇ ದೊಡ್ಡ ಮಾರುಕಟ್ಟೆಗೂ ಇದು ಕಡಿಮೆ ಇಲ್ಲದಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಬುದ್ಧಿವಂತಿಕೆ ಮುಖ್ಯಶಿಕ್ಷಕರ ಪ್ರಶಂಸೆ:ಮಕ್ಕಳು ಬರೀ ಪುಸ್ತಕದ ಬದನೆಕಾಯಿಗೆ ಸೀಮಿತವಾಗದೆ, ಕೆಜಿ ಹಾಗೂ ಅರ್ಧ ಕೆಜಿ ಲೆಕ್ಕಾಚಾರವನ್ನು ಪ್ರಾಯೋಗಿಕವಾಗಿ ಮಾಡುತ್ತಿರುವುದು ಅವರ ಗಣಿತದ ಜ್ಞಾನಕ್ಕೆ ಸಾಕ್ಷಿ. ಗ್ರಾಹಕರಿಗೆ ನಗುಮುಖದಿಂದ ಸ್ಪಂದಿಸುವ ಮೂಲಕ ಅವರು ಸಂವಹನ ಕಲೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ವ್ಯವಹಾರದಲ್ಲಿ ಹಣ ಗಳಿಸುವುದಕ್ಕಿಂತ ಹೆಚ್ಚಾಗಿ, ಪ್ರತಿಯೊಂದು ರೂಪಾಯಿಯ ಹಿಂದಿರುವ ಪರಿಶ್ರಮವನ್ನು ಅವರು ಇಂದು ಕಣ್ಣಾರೆ ಕಂಡಿದ್ದಾರೆ. ಮಕ್ಕಳ ಈ ಸೃಜನಶೀಲತೆ ಮತ್ತು ಆತ್ಮಾಭಿಮಾನ ನಮಗೆ ನಿಜಕ್ಕೂ ಹೆಮ್ಮೆ ತಂದಿದೆ ಎಂದರು.
ಶಾಲಾ ಆವರಣವು ಅಕ್ಷರಶಃ ಸಂತೆಯಾಗಿ ಮಾರ್ಪಟ್ಟಿತ್ತು. ತರಕಾರಿ, ಹಣ್ಣು, ಹೂವುಗಳಿಂದ ಹಿಡಿದು ಚಾಟ್ಸ್, ಸೀರೆ, ಹಾಸಿಗೆ-ದಿಂಬು ಹಾಗೂ ಬಿದಿರು ಬುಟ್ಟಿಗಳವರೆಗೆ ಎಲ್ಲವೂ ಲಭ್ಯವಿದ್ದವು. ವಿಶೇಷವೆಂದರೆ, ಅನೇಕ ಮಕ್ಕಳು ತಮ್ಮ ಪೋಷಕರು ಮಾಡುವ ವೃತ್ತಿಯನ್ನೇ ಇಲ್ಲಿಯೂ ಅಳವಡಿಸಿಕೊಂಡು ಕುಶಲತೆಯಿಂದ ವ್ಯಾಪಾರ ಮಾಡಿದ್ದು ಎಲ್ಲರ ಗಮನ ಸೆಳೆಯಿತು.