ಮಕ್ಕಳ ಗ್ರಾಮಸಭೆ: 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ನೀಡಲು ಒತ್ತಾಯ!

KannadaprabhaNewsNetwork | Published : Jan 11, 2025 12:46 AM

ಸಾರಾಂಶ

ಎಂಟನೆ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ಬೇಕೆಬೇಕು. ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ಬೇಕು. ಸ್ವಚ್ಚತೆ ಪ್ಯಾಡ್‌ಗಳನ್ನು ಶಾಲೆಗಳಲ್ಲಿಯೇ ವಿತರಿಸಬೇಕು ಎಂದು ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿನಿಯರು ಮಕ್ಕಳ ಗ್ರಾಮಸಭೆಯಲ್ಲಿ ಬೇಡಿಕೆ ಇಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಎಂಟನೆ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ಬೇಕೆಬೇಕು. ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ಬೇಕು. ಸ್ವಚ್ಚತೆ ಪ್ಯಾಡ್‌ಗಳನ್ನು ಶಾಲೆಗಳಲ್ಲಿಯೇ ವಿತರಿಸಬೇಕು ಎಂದು ವಿದ್ಯಾರ್ಥಿನಿಯರು ಮಕ್ಕಳ ಗ್ರಾಮಸಭೆಯಲ್ಲಿ ಬೇಡಿಕೆ ಇಟ್ಟರು.

ಶುಕ್ರವಾರ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಹಾಗು ನಾವು ಪ್ರತಿಷ್ಠಾನದ ವತಿಯಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ವಿದ್ಯಾರ್ಥಿಗಳು ಉಚಿತ ಸೈಕಲ್ ನೀಡಬೇಕೆಂದು ಮನವಿ ಮಾಡಿಕೊಂಡರು.

ಗ್ರಾಮೀಣ ಭಾಗದಲ್ಲಿ ಬಸ್ ಸೌಕರ್ಯಗಳಿಲ್ಲ. ಕಾಲ್ನಡಿಗೆಯಲ್ಲೆ ಬರಬೇಕು. ಗುಣಮಟ್ಟದ ಸೈಕಲ್ ನೀಡಿದರೆ ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬಹುದು ಎಂದು ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಯುಕ್ತ, ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ನಿರ್ಮಲ ಮನವಿ ಮಾಡಿದರು. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಹಸಿ-ಒಣ ಕಸ ಹಾಕಲು ತೊಟ್ಟಿ ಮಾಡಿಕೊಡಬೇಕು ಎಂದು ಪಂಚಾಯಿತಿಗೆ ಯುಕ್ತ ಮನವಿ ಮಾಡಿದರು. ಶಾಲೆಗೆ ವಿಜ್ಞಾನ ಪ್ರಯೋಗಾಲಯ ಮತ್ತು ಚನ್ನಬಸಪ್ಪ ಸಭಾಂಗಣದ ಮುಂಭಾಗ ಇಂಟರ್‌ಲಾಕ್ ಅಳವಡಿಸಿಕೊಡಬೇಕು ಎಂದರು.

ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯುತ್ ಸಮಸ್ಯೆ ಇದೆ. ಕೆಲವು ಕೊಠಡಿಗೆ ವಿದ್ಯುತ್ ಇಲ್ಲ. ಶಾಲೆಗೆ ಇಳಿಜಾರು ಪ್ರದೇಶದಲ್ಲಿದ್ದು ರಸ್ತೆಯಿಲ್ಲ. ಮಳೆಗಾಲದಲ್ಲಿ ಬಿದ್ದೆದ್ದು ಶಾಲೆಗೆ ಹೋಗಬೇಕು. ಶಾಲಾ ಆವರಣದಲ್ಲಿ ಬೀಡಾಡಿ ದನಗಳ ಹಾವಳಿ ಇದ್ದು, ಗೇಟ್ ನಿರ್ಮಿಸಿಕೊಡಬೇಕು ಎಂದು ಬೇಡಿಕೆಯಿಟ್ಟರು.

ಚೌಡ್ಲು ಸರ್ಕಾರಿ ಪ್ರಾಥಮಿಕ ಶಾಲೆಯ ತನ್ವಿತಾ ಉತ್ತಮ ಶೌಚಗೃಹ ಬೇಕು. ಯರ‍್ಯಾರೊ ರಾತ್ರಿ ಹೊತ್ತು ಆವರಣದಲ್ಲಿ ಮದ್ಯ ಸೇವಿಸಿ ಬಾಟಲ್‌ಗಳನ್ನು ಎಸೆಯುತ್ತಾರೆ. ಸಿ.ಸಿ ಕ್ಯಾಮೆರಾ ಅಳವಡಿಸಿಕೊಡಿ ಎಂದು ಹೇಳಿದರು.

ಚೌಡ್ಲು ಶಾಲೆಯ ನಿಶಾಂತ್ ಡಿಜಿಟಲ್ ಗ್ರಂಥಾಲಯದ ಬೇಡಿಕೆಯಿಟ್ಟರು. ವಿದ್ಯಾರ್ಥಿಗಳಾ ಹಮೀದ್, ಸುಜನ ಕಾಂಪೌಂಡ್, ಬ್ಲಾಕ್ ಬೋರ್ಡ್ ಬಣ್ಣ ಹೊಡೆಸಿಕೊಡಿ ಎಂದು ಮನವಿ ಮಾಡಿದರು.

ಪಂಚಾಯಿತಿ ಪಿಡಿಒ ರವಿ ನಾಯರ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಶಾಲೆಗಳಿಗೆ ಶೌಚಗೃಹ, ಕಾಂಪೌಂಡ್, ಹೂತೋಟ, ಮೈದಾನ ದುರಸ್ತಿ, ಕಟ್ಟಡ ದುರಸ್ತಿ, ಕುಡಿಯುವ ನೀರಿ ಸೌಲಭ್ಯಗಳನ್ನು ಒದಗಿಸಲು ಕ್ರಿಯಾಯೋಜನೆ ಮಾಡಲಾಗಿದೆ. ವಿದ್ಯಾರ್ಥಿ ಬೇಡಿಕೆಗಳನ್ನು ಈಡೇರಿಸುವುದು ಸ್ಥಳೀಯ ಪಂಚಾಯಿತಿಗಳ ಕರ್ತವ್ಯವೂ ಆಗಿದೆ. ಮಕ್ಕಳ ಬೇಡಿಕೆಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಗಳಿಗೂ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಪಂಚಾಯಿತಿ ಅಧ್ಯಕ್ಷೆ ಸಿ.ಎಸ್.ಗೀತಾ ಮಾತನಾಡಿ, ಹೆಣ್ಣು ಮಕ್ಕಳಿಗೆ ಶುಚಿ ಪ್ಯಾಡ್‌ಗಳು ಸರ್ಕಾರಿ ಆಸ್ಪತ್ರೆಗಳ ಸ್ನೇಹ ಕ್ಲಿನಿಕ್ ದೊರೆಯುತ್ತಿವೆ. ಅಲ್ಲಿಗೆ ಹೋಗಿ ಗ್ರಾಮೀಣ ವಿದ್ಯಾರ್ಥಿನಿಯರು ಪಡೆದುಕೊಳ್ಳಲು ಸಾಧ್ಯವಿಲ್ಲ. ಅರೋಗ್ಯ ಇಲಾಖೆ ಪ್ರತಿ ಶಾಲೆಗಳಿಗೆ ತಲುಪಿಸಬೇಕು. ಸರ್ಕಾರ ಯೋಜನೆಗಳ ಸೌಲಭ್ಯ ಪ್ರತಿ ವಿದ್ಯಾರ್ಥಿನಿಗೂ ಸಿಗಬೇಕು. ಸಂಬಂಧಪಟ್ಟ ಇಲಾಖೆಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ ಮಾತನಾಡಿ, ಮಕ್ಕಳು ತಮಗೆ ಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ಓದಿನ ಜೊತೆಗೆ ಕ್ರೀಡಾಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ಬೇರೆ ವಿದ್ಯಾರ್ಥಿಗಳು ಕೆಟ್ಟ ಚಟಗಳನ್ನು ಮಾಡುತ್ತಿದ್ದರೆ ಗೌಪ್ಯವಾಗಿ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ವಿದ್ಯಾರ್ಥಿನಿ ಕನಸು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ವಿದ್ಯಾರ್ಥಿನಿ ನಿರ್ಮಲ, ನಾವು ಪ್ರತಿಷ್ಠಾನದ ಸದಸ್ಯರಾದ ಕುಮಾರಿ, ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಶೋಧ, ಶಿಕ್ಷಣ ಇಲಾಖೆಯ ದಯಾನಂದ ಇದ್ದರು.

Share this article