ಮಕ್ಕಳ ಸಹಾಯವಾಣಿ ಸಿಬ್ಬಂದಿಗಿಲ್ಲ 10 ತಿಂಗಳಿಂದ ವೇತನ

KannadaprabhaNewsNetwork |  
Published : Aug 08, 2026, 02:00 AM IST
Children

ಸಾರಾಂಶ

ಸಂಕಷ್ಟದಲ್ಲಿರುವ ಮಕ್ಕಳಿಗಾಗಿ ಮಿಡಿಯುವ ‘ಮಕ್ಕಳ ಸಹಾಯವಾಣಿ’ಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಈಗ ರಾಜ್ಯಾದ್ಯಂತ ಸಂಕಷ್ಟದಲ್ಲಿದ್ದಾರೆ. ಕಳೆದ ಹತ್ತು ತಿಂಗಳಿಂದ ಭತ್ಯೆ ಮತ್ತು ವೇತನ ಇಲ್ಲದೆ ಜೀವನ ನಡೆಸಲು ಅವರಿವರ ಬಳಿ ಸಹಾಯಯಾಚಿಸಿ ಕಣ್ಣೀರು ಹಾಕುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

 ಕೊಪ್ಪಳ : ಸಂಕಷ್ಟದಲ್ಲಿರುವ ಮಕ್ಕಳಿಗಾಗಿ ಮಿಡಿಯುವ ‘ಮಕ್ಕಳ ಸಹಾಯವಾಣಿ’ಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಈಗ ರಾಜ್ಯಾದ್ಯಂತ ಸಂಕಷ್ಟದಲ್ಲಿದ್ದಾರೆ. ಕಳೆದ ಹತ್ತು ತಿಂಗಳಿಂದ ಭತ್ಯೆ ಮತ್ತು ವೇತನ ಇಲ್ಲದೆ ಜೀವನ ನಡೆಸಲು ಅವರಿವರ ಬಳಿ ಸಹಾಯಯಾಚಿಸಿ ಕಣ್ಣೀರು ಹಾಕುತ್ತಿದ್ದಾರೆ.

ರಾಜ್ಯಾದ್ಯಂತ ವಾತ್ಯಲ್ಯ ಯೋಜನೆಯಡಿಯಲ್ಲಿ ಮಕ್ಕಳ ಸಹಾಯವಾಣಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಈಗ ವೇತನವಿಲ್ಲದೆ ತೀವ್ರ ಸಮಸ್ಯೆಯಿಂದ ಗೋಳಾಡುತ್ತಿದ್ದಾರೆ.

ಸಂಕಷ್ಟ, ದೌರ್ಜನ್ಯ, ನಿರ್ಲಕ್ಷ್ಯ, ಶೋಷಣೆ, ಕಳ್ಳಸಾಗಣೆ, ಬಾಲ್ಯ ವಿವಾಹದಂತಹ ಸಂಕಷ್ಟಕ್ಕೆ ಸಿಲುಕುವ ಮಗುವನ್ನು ರಕ್ಷಿಸಲು ಅಥವಾ ಮಾಹಿತಿ ಗೊತ್ತಾಗದವರು ಮಕ್ಕಳನ್ನು ಕಾಪಾಡುವ ಉದ್ಧೇಶದಿಂದ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡುತ್ತಾರೆ. ಹೀಗೆ ಕರೆ ಬಂದರೆ ಸಾಕು ಅದು ಹಗಲು ಇರಲಿ, ರಾತ್ರಿ ಇರಲಿ, ಪೊಲೀಸರ ಸಹಾಯದೊಂದಿಗೆ ಅಖಾಡಕ್ಕೆ ಇಳಿದು ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡುವ ಕಾರ್ಯವನ್ನು ಈ ಸಿಬ್ಬಂದಿ ಮಾಡುತ್ತಾರೆ.

ಕೇಂದ್ರ ಸರ್ಕಾರದ ನೆರವಿನಿಂದ ವಾತ್ಸಲ್ಯ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತದೆ. ಇದರಡಿ ಮಕ್ಕಳ ಸಹಾಯವಾಣಿ ಕಾರ್ಯ ನಿರ್ವಹಿಸುತ್ತದೆ. ಆದರೆ, ತಾಂತ್ರಿಕ ಕಾರಣದಿಂದ ಕಳೆದ ಹತ್ತು ತಿಂಗಳಿಂದ ಈ ಸಿಬ್ಬಂದಿಗೆ ವೇತನ ಮತ್ತು ಇತರ ಭತ್ಯೆ ಇಲ್ಲ. ಈ ಸಮಸ್ಯೆ ನೀಗಿಸುವಂತೆ ಹಲವು ದಿನಗಳಿಂದ ಮಾಡಿದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ.ಯವರು ಖುದ್ದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಮಕ್ಕಳ ಸಹಾಯವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿ ಮಾಡುವಂತೆ ಮನವಿ ಮಾಡಿದ್ದಾರೆ.

ಮಕ್ಕಳ ನ್ಯಾಯ ಕಾಯ್ದೆ ಹಾಗೂ 2025 ಮಿಷನ್ ವಾತ್ಸಲ್ಯ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೇ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ತುರ್ತಾಗಿ ಕ್ರಮ ವಹಿಸಿಬೇಕು. ಇಲ್ಲದಿದ್ದರೆ ಮಕ್ಕಳ ಸಹಾಯಕ್ಕೆ ಇರುವ 1098 ಸಹಾಯವಾಣಿಯ ಕಾರ್ಯವೇ ಸ್ಥಗಿತವಾಗಲಿದೆ ಎಂದು ತಿಪ್ಪೇಸ್ವಾಮಿಯವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ:

ಕಳೆದ ಹತ್ತು ತಿಂಗಳಿಂದ ವೇತನ ಇಲ್ಲದೆ ಆಕ್ರೋಶಗೊಂಡಿರುವ ಮಕ್ಕಳ ಸಹಾಯಣಿ ಸಿಬ್ಬಂದಿ, ಸಿಐಟಿಯು ಸಂಘಟನೆಯ ಕರ್ನಾಟಕ ಸರ್ಕಾರಿ ಕಾಯಂಯೇತರ ನೌಕರರ ಒಕ್ಕೂಟದ ಮೂಲಕ ಆಗಸ್ಟ್‌ 11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಕ್ಕಳ ಸಹಾಯವಾಣಿ ಸಿಬ್ಬಂದಿ ಬೆಂಗಳೂರಿಗೆ ತೆರಳುವುದರಿಂದ 24/7 ಮಕ್ಕಳ ಸಹಾಯವಾಣಿ ಸ್ಥಗಿತವಾಗಲಿದೆ. ಇನ್ನಾದರೂ ರಾಜ್ಯ ಸರ್ಕಾರ ಕೂಡಲೇ ವೇತನ ಬಿಡುಗಡೆ ಮಾಡುವುದೇ ಎನ್ನುವುದನ್ನು ಕಾದು ನೋಡಬೇಕು.

ಕಳೆದ 10 ತಿಂಗಳಿಂದ ವೇತನ ಇಲ್ಲದೇ ಇರುವುದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ವೇತನ ಹೆಚ್ಚಳ ಮಾಡುವಂತೆಯೂ ಆಗ್ರಹಿಸಲಾಗುತ್ತಿದೆ.

-ಎಸ್. ವರಲಕ್ಷ್ಮಿ, ಅಧ್ಯಕ್ಷೆ, ಸರ್ಕಾರಿ ಕಾಯಂಯೇತರ ನೌಕರರ ಒಕ್ಕೂಟ (ಸಿಐಟಿಯು).

ಹತ್ತು ತಿಂಗಳಿಂದ ವೇತನ ಇಲ್ಲದೇ ಹೇಗೆ ಕಾರ್ಯ ನಿರ್ವಹಿಸುವುದು ಹೇಳಿ?. ನಿತ್ಯದ ಜೀವನಕ್ಕಾಗಿ ಅವರಿವರ ಬಳಿ ಸಾಲ ಪಡೆದು ಸಾಕಾಗಿ ಹೋಗಿದೆ.

-ಹೆಸರು ಹೇಳಲಿಚ್ಛಿಸದ ಸಿಬ್ಬಂದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ತಮಿಳುನಾಡು ಸಿಎಂ ಪುತ್ರನ ಚಿತ್ರದಲ್ಲಿ ಸಾನ್ವಿ ಸುದೀಪ್‌ ಹಾಡು
ಬರ ಘೋಷಣೆಗೆ ಆಗ್ರಹಿಸಿ ಕಾಂಗ್ರೆಸ್‌ ಶಾಸಕ ಯಶವಂತರಾಯ ರಾಜೀನಾಮೆ, ತಿರಸ್ಕಾರ