ಕನ್ನಡಪ್ರಭ ವಾರ್ತೆ ಕಾರ್ಕಳ
ಕನ್ನಡ ನಾಡು-ನುಡಿ ಸಂಸ್ಕೃತಿ, ಸಂಗೀತ, ಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಶಿಸ್ತು, ಸಂಯಮದ ಗುಣಮಟ್ಟವು ವೃದ್ಧಿಯಾಗಿ ಮಕ್ಕಳ ಮನಸ್ಸು ಅರಳುತ್ತದೆ. ಈ ಮೂಲಕ ಮಕ್ಕಳು ದೇಶಕ್ಕೆ ನಾಡಿಗೆ ಉತ್ತಮ ಆಸ್ತಿಯಾಗುತ್ತಾರೆ ಎಂದು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಶೆಟ್ಟಿ ಹೇಳಿದರು.ಎಸ್.ಆರ್.ಪದವಿ ಪೂರ್ವ ಕಾಲೇಜಿನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ನಡೆದ ಯುವ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮವಾದ ಯುವ ಸೌರಭ ಉದ್ಘಾಟಿಸಿ ಮಾತನಾಡಿದರು.ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಮಾತನಾಡಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಮ್ಮ ಸಂಸ್ಥೆಯಲ್ಲಿ ಆಯೋಜಿಸಿರುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಸ್ಫೂರ್ತಿದಾಯಕ. ಈ ಕಾರ್ಯಕ್ರಮವು ಸುಂದರವಾಗಿ ಮೂಡಿ ಬರಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಉಡುಪಿಯ ನೃತ್ಯ ಗುರು ವಿದೂಷಿ ಡಾ. ಮಂಜರಿ ಚಂದ್ರ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಧರ್ಮ-ಕರ್ಮಗಳನ್ನು ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದಾಗ ಯೋಗ್ಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಕಾಯ ವಾಚ ಮನಸ ನಾವು ಯೋಗ್ಯರಾಗಿ ಬದುಕಬೇಕು ಎಂದು ಹೇಳಿದರು.ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಎಸ್.ಆರ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್, ಎಸ್.ಆರ್. ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಭಗವತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಜಾನಪದ ಗಾಯನ, ಸಮೂಹ ನೃತ್ಯ, ಕಂಸಾಲೆ ನೃತ್ಯ, ವೀರಗಾಸೆ ನೃತ್ಯ, ನಾಟಕ: ಮಾಯೆಯ ಬೆನ್ನೇರಿ, ಸೀತಾರಾಮ ಕಲ್ಯಾಣ- ನೃತ್ಯ ರೂಪಕ ಪ್ರದರ್ಶನ ನಡೆಯಿತು.
ಪೂರ್ಣಿಮಾ ಸ್ವಾಗತಿಸಿದರು. ಮಹೇಶ್ ನಿರೂಪಿಸಿ, ವಂದಿಸಿದರು.