ಪಟ್ಟಣದಲ್ಲಿ ವಿವಿಧ ಮಹಿಳಾ ಸಂಘಟನೆ, ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆಮಹಿಳೆ ಮೇಲೆ ಎಲ್ಲೇ ದೌರ್ಜನ್ಯವಾದರೂ ಎಲ್ಲಾ ಮಹಿಳೆಯರು ಸುಮ್ಮನೆ ಕೂರಬಾರದು. ಅದರ ವಿರುದ್ಧ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮಾಜಿ ಸಚಿವೆ ಮೋಟಮ್ಮ ಕರೆ ನೀಡಿದರು.ಶನಿವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ವಿವಿಧ ಮಹಿಳಾ ಸಂಘಟನೆ ಹಾಗು ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಗಂಡು ಹೆಣ್ಣು ಇಬ್ಬರೂ ಸಮಾನರು. ಇಬ್ಬರಲ್ಲೂ ಉತ್ತಮ ಬಾಂಧವ್ಯ ಮೂಡುವ ವಾತಾವರಣ ಸೃಷ್ಟಿಸಲು ಪೋಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸ ಬೇಕು. ಆಗ ಗಂಡು ಹೆಣ್ಣಿನ ಉತ್ತಮ ಬಾಂಧವ್ಯ ಮೂಡುವುದರಿಂದ ದೌರ್ಜನ್ಯ ನಿಯಂತ್ರಣಗೊಳ್ಳುತ್ತದೆ ಎಂದರು.
ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮಯ ಸಂಗತಿ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಬಹಳ ಹಿಂದುಳಿದಿದ್ದಾರೆ. ರಾಜ್ಯದಲ್ಲಿ ಶೇ.50 ರಷ್ಟು ಮಹಿಳಾ ಮತದಾರರಿದ್ದರೂ ಕಳೆದ ವಿಧಾನಸಭೆ ಚುನಾವಣೆ ಯಲ್ಲಿ 25 ಮಹಿಳೆಯರು ಸ್ಪರ್ಧಿಸಿದ್ದು, ಕೇವಲ 6 ಮಹಿಳೆಯರು ಶಾಸಕರಾಗಿದ್ದಾರೆ. ಇನ್ನು ಮುಂದೆ ಯಾವುದೇ ಚುನಾವಣೆ ಗಳು ಬಂದರೂ ಮಹಿಳೆಯರನ್ನು ಗೆಲ್ಲಿಸಲು ಮುಂದಾಗಬೇಕೆಂದು ಕರೆ ನೀಡಿದರು. ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರದ ಕೊರತೆ ಹೆಚ್ಚಾಗಿದೆ. ಮೊಬೈಲ್, ಟಿವಿಗಳಿಂದ ನಮಗೆ ಅರಿವಿಲ್ಲದೇ ಆಕ್ರೋಶ ತುಂಬಿಕೊಳ್ಳುವ ಪರಿಣಾಮ ಅಶಾಂತಿಗೆ ಕಾರಣವಾಗುತ್ತಿದೆ. ಬಹು ಸಂಸ್ಕೃತಿ, ಮಮತೆ ಹಾಗೂ ದ್ವೇಷ ರಹಿತ ಸಮಾಜ ನಿರ್ಮಾಣಗೊಳ್ಳಲು ಮಹಿಳೆಯರಿಂದ ಮಾತ್ರ ಸಾಧ್ಯ. ಅದಕ್ಕಾಗಿ ಮಹಿಳೆಯರಲ್ಲಿ ಯುದ್ಧ ವಿರೊಧಿ ಮನಸ್ಥಿತಿ ನಿರ್ಮಾಣವಾಗಬೇಕು. ಮಹಿಳೆಯರ ಸಬಲೀಕರಣಕ್ಕೆ ಎಷ್ಟೋ ಮಂದಿ ಹೋರಾಟ ಮಾಡಿದ್ದಾರೆ. ಅದರಂತೆ ಮೋಟಮ್ಮ ಕೂಡ ಸಚಿವರಾಗಿದ್ದಾಗ ತಂದ ಸ್ತ್ರೀಶಕ್ತಿ ಯೋಜನೆಯಂತಹ ಕ್ರಾಂತಿಕಾರಿ ಕಾರ್ಯಕ್ರಮದಿಂದ ಮಹಿಳೆಯರ ಸಬಲೀಕರಣ ಹೆಚ್ಚಾಗಿದೆ. ಇದಕ್ಕೆ ಹಾಗೂ ನಮ್ಮೆಲ್ಲರ ಬದುಕಿಗೆ ಶಕ್ತಿ ತುಂಬಿದ್ದು ಸಂವಿಧಾನದಲ್ಲಿ ಎಂಬುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಹಿಂದೆಗಿಂತ ಹಾಗೂ ಈಗಿನ ಸ್ಥಿತಿಗತಿ ಅವಲೋಕಿಸಿದರೆ ಮಹಿಳೆಯರ ಸುಧಾರಣೆ ಸಾಕಷ್ಟು ಬದಲಾವಣೆಯಾಗಿದೆ. ಮಹಿಳೆ ಹೊರತುಪಡಿಸಿ ಸಮಾಜ ನೋಡಲು ಸಾಧ್ಯವೇ ಇಲ್ಲ. ಪೊಲೀಸ್ ಇಲಾಖೆ ಮಾತ್ರವಲ್ಲ. ಎಲ್ಲಾ ರಂಗದಲ್ಲಿ ಮಹಿಳೆಯರು ಗುರುತಿಸಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದರೆ ಮಹಿಳೆಯರ ಸಬಲೀಕರಣ ಆಗುತ್ತಿದ್ದು, ಇನ್ನು ಅಧಿಕಗೊಳ್ಳಬೇಕಾಗಿದೆ ಎಂದು ಹೇಳಿದರು. ರಾಜ್ಯ ರೈತ ಹೋರಾಟ ಸಮಿತಿ ಅಧ್ಯಕ್ಷೆ ಅನುಸೂಯ, ಇನ್ಫೋಸಿಸ್ ಕಂಪನಿ ಅಸಿಸ್ಟೆಂಟ್ ಮ್ಯಾನೇಜರ್ ಮಂಜುಳಾ ಸಂತೋಷ್, ಕೈಗಾರಿಕೋದ್ಯಮಿ ಎಚ್.ಸರೋಜಾ ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀ ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ಕಮಲಾಕ್ಷಮ್ಮ ವಹಿಸಿದ್ದರು. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಬೆಳಗಾರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ತಾ.ಪಂ. ಇಒ ದಯಾವತಿ, ಸಿಡಿಪಿಒ ಮಹೇಶ್ ಉಪಸ್ಥಿತರಿದ್ದರು.8 ಕೆಸಿಕೆಎಂ 4ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವೆ ಮೋಟಮ್ಮ ಉದ್ಘಾಟಿಸಿದರು. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಕೆ. ವೆಂಕಟೇಶ್, ಜಯರಾಂ ಇದ್ದರು.