ನಾರಿಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳ ನಡೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಮೇ 1ರಂದು "ಜನಾಕ್ರೋಶ ಪಾದಯಾತ್ರೆ ಹಾಗೂ ನಾರಿ ಶಕ್ತಿ ಪ್ರತಿಭಟನಾ ಸಭೆ " ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿ:

ನಾರಿಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳ ನಡೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಮೇ 1ರಂದು "ಜನಾಕ್ರೋಶ ಪಾದಯಾತ್ರೆ ಹಾಗೂ ನಾರಿ ಶಕ್ತಿ ಪ್ರತಿಭಟನಾ ಸಭೆ " ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷ ಸಿ. ಮಂಜುಳಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ. 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್‌ ಹಾಗೂ ಅವರ ಮಿತ್ರಪಕ್ಷಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಮಸೂದೆ ಜಾರಿಯಾಗುವಲ್ಲಿ ವಿಫಲವಾಯಿತು. ಕಾಂಗ್ರೆಸ್‌ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿರುವ ಪಕ್ಷವಾಗಿದೆ. ಅವರಿಗೆ ಮಹಿಳೆಯರಿಗೆ ಸಮಾನ ಹಕ್ಕು ದೊರೆಯುವುದು ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆಯೇ ಪ್ರಧಾನ ಮಂತ್ರಿಗಳು ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸುತ್ತಿರುವ ವಿಷಯ ತಿಳಿದು ಅವರಿಗೆ ಬೆಂಬಲ, ಶಕ್ತಿ ನೀಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರಧಾನಿಗಳಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಜತೆಗೆ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ, 5 ಲಕ್ಷಕ್ಕೂ ಅಧಿಕ ಮಿಸ್ಕ್‌ಕಾಲ್ಡ್ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ಎಂದರು.

ಮಹಿಳಾ ಮೀಸಲಾತಿ ಜಾರಿಗೆ ರಾಜ್ಯದ ಮಹಿಳೆಯರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿ ರಾಜಕೀಯ ರಂಗದಲ್ಲಿ ಪುರುಷರಷ್ಟೆ ನಮಗೂ ಸ್ಥಾನಮಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್‌ ಹಾಗೂ ಅವರ ಮಿತ್ರಪಕ್ಷಗಳು ಇದನ್ನು ವಿರೋಧಿಸುವ ಮೂಲಕ ಮಹಿಳಾ ಕುಲಕ್ಕೆ ಅವಮಾನ ಮಾಡಿದೆ. ಕಾಂಗ್ರೆಸ್‌ನ ಈ ನಡೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಮಹಿಳಾ ಮೋರ್ಚಾದಿಂದ ಹಲವು ರೀತಿಯ ಪ್ರತಿಭಟನೆ ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮೇ 1ರಂದು ಸಂಜೆ 4 ಗಂಟೆಗೆ ಇಲ್ಲಿನ ರೈಲು ನಿಲ್ದಾಣದ ಬಳಿಯ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಪ್ರಾರಂಭವಾಗುವ ಜನಾಕ್ರೋಶ ಪಾದಯಾತ್ರೆಯು ನೆಹರು ಮೈದಾನಕ್ಕೆ ಆಗಮಿಸಿ ಸಮಾರೋಪಗೊಳ್ಳಲಿದೆ. ಬಳಿಕ ಅಲ್ಲಿ ನಾರಿಶಕ್ತಿ ವಂದನಾ ಪ್ರತಿಭಟನಾ ಸಭೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಜನಾಕ್ರೋಶ ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಅರವಿಂದ ಬೆಲ್ಲದ, ಶಾಸಕ ಸಿ.ಸಿ. ಪಾಟೀಲ, ಮಾಜಿ ಸಚಿವ ಶಶಿಕಲಾ ಜೊಲ್ಲೆ, ಮಾಜಿ ಶಾಸಕಿ ರೂಪಾಲಿ ನಾಯಕ, ಮಾಳವಿಕಾ, ಸ್ಥಳೀಯ ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಸೇರಿದಂತೆ ಮಾಜಿ ಶಾಸಕರು, ವಿಪ ಸದಸ್ಯರು, ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಮಹಿಳಾ ಪ್ರಮುಖ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡರ, ಮಾಜಿ ಶಾಸಕಿ ಸೀಮಾ ಮಸೂತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದವಾ, ಸೆಂಟ್ರಲ್‌ ಕ್ಷೇತ್ರದ ಅಧ್ಯಕ್ಷೆ ಅಕ್ಕಮ್ಮ ಹೆಗಡೆ, ಮಾಲತಿ ಹೂಲಿಕಟ್ಟಿ, ಪೂಜಾ ರಾಯ್ಕರ್, ರಾಜು ಕೋರ್ಯಾಣಮಠ ಸೇರಿದಂತೆ ಹಲವರಿದ್ದರು.