ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಸಾವಯವ ಕೃಷಿಯ ಮಹತ್ವ ಮತ್ತು ಕೃಷಿ ವಿಧಾನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಆವರಣದಲ್ಲಿ ನಿರ್ಮಾಣ ಮಾಡಿರುವ (ನಮ್ಮ ಸಾವಯವ ತೋಟ) ಭುವನೇಶ್ವರಿ ವನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾವಯವ ಕೃಷಿ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕವಾಗಿ ಅರಿವು ಮೂಡಿಸುತ್ತಿರುವ ಬಾಲು ಶಾಲಾ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದರು.
ಹವಾಮಾನ ಬದಲಾವಣೆ ಬಗ್ಗೆ ಸರ್ಕಾರ, ಬುದ್ದಿಜೀವಿಗಳು, ನಾವೆಲ್ಲರೂ ಮಾತನಾಡುತ್ತೇವೆ. ಆದರೆ ಅದರಿಂದ ಬಹಳ ತೊಂದರೆ, ಅನಾಹುತ, ನಷ್ಟವಾಗುವುದು ರೈತರಿಗೆ ಮತ್ತು ಕೂಲಿ ಕಾರ್ಮಿಕರು, ತಳ ಭಾಗದ ಜನರಿಗೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ನಾವು ಮಾತನಾಡಿದರಷ್ಟೇ ಸಾಲದು, ಪರಿಹಾರವನ್ನು ಕಂಡುಕೊಂಡು ಬದಲಾವಣೆ ತರಬೇಕು ಎಂದರು.ಹವಾಮಾನ ಬದಲಾವಣೆಯಿಂದ ಆಗುವ ನಕಾರಾತ್ಮಕ ಬೆಳವಣಿಗೆಯನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ಮತ್ತು ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು ಕ್ರಿಯಾ ಯೋಜನೆಯನ್ನು ತಯಾರಿಸಿ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕನ್ನು ಸಂಪೂರ್ಣ ಸಾವಯವ ಕೃಷಿ ಫಾರಂ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಲು ಸಮೂಹ ಸಂಸ್ಥೆಯ ಟ್ರಸ್ಟಿ ಕವಿತಾ ಬಾಲಸುಬ್ರಹ್ಮಣ್ಯಂ, ಇಂಡಿಯನ್ ಫಾರ್ಮ್ಸ್ ಸಂಸ್ಥಾಪಕ ಅಧ್ಯಕ್ಷ ಕಿರಣ್ ಭಾಸ್ಕರ್, ಮುಖ್ಯ ಶಿಕ್ಷಕಿ ಎಸ್.ಕವಿತಾ, ಆಡಳಿತಾಧಿಕಾರಿ ಮೇಹಾರ್ ಸುಲ್ತಾನ್,ರೈತ ಸಂಘದ ಉಪಾಧ್ಯಕ್ಷ ಕೆ.ಮಲ್ಲಯ್ಯ, ಮುಖಂಡರಾದ ಕೃಷ್ಣಪ್ಪ, ಮರೀಗೌಡ ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ನಗರದ ಗಾಂಧಿ ಭವನದಿಂದ ಶಾಲಾ ಮಕ್ಕಳು ಮತ್ತು ಶಿಕ್ಷಕರು ಹಾಗೂ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.