ಮರಿಯಮ್ಮನಹಳ್ಳಿ; ಮಕ್ಕಳು ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳಬೇಕು. ಆಗ ಮಕ್ಕಳಲ್ಲಿ ಸಹ ಸಾಂಸ್ಕೃತಿಕ ಮನೋಭಾವ ಬೆಳೆಯುತ್ತದೆ ಎಂದು ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತೆ ಹಿರಿಯ ರಂಗಕಲಾವಿದೆ ಡಾ. ಕೆ. ನಾಗರತ್ನಮ್ಮ ಹೇಳಿದರು.
ಮಕ್ಕಳು ಸದಾ ಮೊಬೈಲ್‌ಗೆ ದಾಸರಾಗಿ ಅದರಲ್ಲೇ ಮುಳಿಗಿರುತ್ತಾರೆ. ಮಕ್ಕಳಿಗೆ ತಮ್ಮ ಪಠ್ಯದ ಜತೆಗೆ ಸಂಗೀತ, ನೃತ್ಯ, ನಾಟಕ ಸೇರಿದಂತೆ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಾತ್ರ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಲಿದೆ. ಸಾಂಸ್ಕೃತಿಕ ಮನೋಭಾವನೆಯನ್ನು ರೂಢಿಸಿಕೊಂಡ ಮಕ್ಕಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಕಲಾವಿದರಿಗೆ ಪ್ರಾಯೋಜನ ಕಾರ್ಯಕ್ರಮಗಳನ್ನು ನೀಡುತ್ತಿರುವುದರಿಂದ ಅನೇಕ ಕಲಾವಿದರು ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಿಗೆ ಉತ್ತಮ ಸದಾಭಿರುಚಿಯ ಕಾರ್ಯಕ್ರಮಗಳನ್ನು ನೀಡಲು ನೆರವಾಗಿದೆ ಎಂದರು.ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಿರಿಯ ಜಾನಪದ ಕಲಾವಿದೆ ಕೆ. ಗಜಾಪುರದ ಮಾತಾ ಅಂಜಲಿ ಜೋಗತಿ ಕಾರ್ಯಕ್ರಮ ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ರಂಗಕರ್ಮಿ ಬಿ.ಎಂ.ಎಸ್. ಪ್ರಭು, ಸ್ಥಳೀಯ ಗಾಯಕ ಸಂತೋಷ ಕುಮಾರ್, ಉಪನ್ಯಾಸಕ ಪಿ. ರಾಮಚಂದ್ರ ಮಾತನಾಡಿದರು.ಕಲಾವಿದರಾದ ಪುಷ್ಪ ಪಿ. ಸ್ವಾಗತಿಸಿ, ನಿರೂಪಿಸಿದರು. ಸರದಾರ ಬಿ. ವಂದಿಸಿದರು. ನಂತರ ಬಿ. ಹನುಮಂತ ಮತ್ತು ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.