ಶಿರಸಿಯಲ್ಲಿ ನವರಾತ್ರಿ ಉತ್ಸವ ಸಂಪನ್ನ

KannadaprabhaNewsNetwork |  
Published : Oct 03, 2025, 01:07 AM IST
ಪೊಟೋ2ಎಸ್.ಆರ್.ಎಸ್‌12 (ಉತ್ಸವ ವಿಜಯದಶಮಿಯಂದು ಅಲಂಕೃತಗೊಂಡ ಮಾರಿಕಾಂಬಾ ದೇವಿ.) | Kannada Prabha

ಸಾರಾಂಶ

ತಾಲೂಕಿನಾದ್ಯಂತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 10 ದಿನಗಳು ಆಚರಣೆಯಾದ ಶರನ್ನವರಾತ್ರಿ ಉತ್ಸವ ವಿಜಯದಶಮಿಯ ದಿನವಾದ ಗುರುವಾರ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನಾದ್ಯಂತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 10 ದಿನಗಳು ಆಚರಣೆಯಾದ ಶರನ್ನವರಾತ್ರಿ ಉತ್ಸವ ವಿಜಯದಶಮಿಯ ದಿನವಾದ ಗುರುವಾರ ಸಂಪನ್ನಗೊಂಡಿತು.

ಮಠ ಮತ್ತು ಮಂದಿರಗಳಲ್ಲಿ ಧಾರ್ಮಿಕ ವಿಧಿ-ವಿಧಾನಗಳು ವಿಧ್ಯುಕ್ತವಾಗಿ ನೆರವೇರಿದವು. ದೇವಾಲಯಗಳಲ್ಲಿ ಸಂಗೀತ, ನೃತ್ಯ, ಕೀರ್ತನೆ, ತಾಳಮದ್ದಲೆ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆದವು. ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಆಯೋಜಿಸಿದ ಹತ್ತು ಹಲವು ಸ್ಪರ್ಧೆ ಚಟುವಟಿಕೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ದೇವಾಲಯಗಳು ಮಠಗಳಲ್ಲಿ ಮಾತ್ರ ಅಲ್ಲದೆ ಕೆಲವು ಕಡೆ ಮನೆಗಳಲ್ಲಿ ಸಪ್ತಶತಿ ಪಾರಾಯಣ ನಡೆಸಲಾಯಿತು. ಉತ್ಸವದ ಮುಕ್ತಾಯದ ದಿನವಾದ ವಿಜಯದಶಮಿ ಸಂದರ್ಭದಲ್ಲಿ ಬನ್ನಿ ಪೂಜೆ ನೆರವೇರಿಸಲಾಯಿತು.

ನವರಾತ್ರಿಯಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತ ಸಮೂಹವೇ ಆಗಮಿಸಿ ದೇವಿಯ ದರ್ಶನ ಪಡೆದಿದೆ. ಅದೇ ರೀತಿ ದಶಮಿಯಂದು ಸಹ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವಿಯಲ್ಲಿ ಇಷ್ಟಾರ್ಥ ಸಿದ್ಧಿಗೆ ಮೊರೆಯಿಟ್ಟರು. ಉಡಿ, ಕುಂಕುಮಾರ್ಚನೆ, ಹಣ್ಣುಕಾಯಿ ಸೇವೆ ಸಲ್ಲಿಸಿದರು. ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ದೇವಾಲಯದ ಹೊರಗೂ ಬಹಳ ದೂರದವರೆಗೆ ಸರತಿ ಸಾಲು ಕಂಡುಬಂತು. ಮಳೆಯನ್ನೂ ಲೆಕ್ಕಿಸದೇ ಭಕ್ತರು ದೇವಿಯ ದರ್ಶನ ಪಡೆದು ಕೃತಾರ್ಥರಾದರು.

ಸ್ವರ್ಣವಲ್ಲೀ ಮಠದಲ್ಲಿ ಶರನ್ನವರಾತ್ರಿ ಉತ್ಸವ:

ಶಿರಸಿ ತಾಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಶ್ರೀಮದ್ ಗಂಗಾಧರೇದ್ರ ಸರಸ್ವತೀ ಸ್ವಾಮೀಜಿ ಬ್ರಾಹ್ಮೀಮುಹೂರ್ತದಲ್ಲಿ ಮತ್ತು ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾಯಂಕಾಲ ಶ್ರೀಚಕ್ರಾರ್ಚನೆಯನ್ನು ಹಾಗೂ ಶ್ರೀದೇವಿಯ ಮತ್ತು ಶಾರದಾ ಪೂಜೆಗೈದರು. ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ದೇವಿ ಭಾಗವತ, ಅಧ್ಯಾತ್ಮ ರಾಮಾಯಣ, ಪುರಾಣ, ಶತರುದ್ರ, ಬ್ರಹ್ಮಾಸ್ತ್ರ ಜಪ, ಚಂಡಿ ಪಾರಾಯಣ, ಕ್ಷೇತ್ರಪಾಲ ಬಲಿ, ಲಕ್ಷ್ಮೀ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ವೈದಿಕರಿಂದ ನೆರವೇರಿದವು. ಶಿರಸಿ ಶ್ರೀ ರಾಮಕ್ಷತ್ರಿಯ ಶಿಷ್ಯರು ಹಾಗೂ ವೈಯಕ್ತಿಕ ಸೇವಾಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಸನ್ನಿಧಿಯಲ್ಲಿ ಸೇವೆಯನ್ನು ಸಲ್ಲಿಸಿ, ಶ್ರೀ ಶ್ರೀಗಳವರಿಂದ ತೀರ್ಥ, ಆಶೀರ್ವಾದ ಮಂತ್ರಾಕ್ಷತೆ ಪಡೆದರು.ಸಾಯಂಕಾಲ ನಡೆದ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಮ್ಮಚಗಿಯ ಸುದರ್ಶನ ಭಜನಾ ಮಂಡಳಿ ಅವರಿಂದ ಭಜನೆ ಕಾರ್ಯಕ್ರಮ ನೆರವೇರಿತು. ಪ್ರಕಾಶ ಹೆಗಡೆ ಯಡಳ್ಳಿ ಹಾರ್ಮೋನಿಯಂ ಮತ್ತು ಮಂಜುನಾಥ ಭಟ್ಟ ನೆಬ್ಬೂರು ತಬಲಾದಲ್ಲಿ ಸಹಕರಿಸಿದರು. ಯಕ್ಷಗೆಜ್ಜೆ ಅವರಿಂದ ಮಕ್ಕಳ ಯಕ್ಷಗಾನ ಅಭಿಮನ್ಯು ಕಾಳಗ ನಡೆಯಿತು. ದಕ್ಷಿಣಾಮೂರ್ತಿ ಯಕ್ಷಧಾಮ ಅವರಿಂದ ಹೂವಿನಕೋಲು ಎಂಬ ವಿನೂತನ ಕಾರ್ಯಕ್ರಮ ನೆರವೇರಿತು. ಕಲಾವಿದರಿಗೆ ಪ್ರಮಾಣಪತ್ರ, ಸ್ಮರಣಿಕೆ ಮತ್ತು ಸುವರ್ಣಮಂತ್ರಾಕ್ಷತೆ ನೀಡಲಾಯಿತು. ಆರ್.ಎನ್. ಭಟ್ ಸುಗಾವಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ