ಮಕ್ಕಳಿಗೆ ಓದುವಂತೆ ಒತ್ತಡ ಹಾಕಬಾರದು: ಮುಕುಂದರಾಜ್

KannadaprabhaNewsNetwork | Published : Jan 12, 2025 1:16 AM

ಸಾರಾಂಶ

ಆಟವಾಡಿಕೊಂಡು ಸಂತೋಷದಿಂದ ಪಾಠ ಪ್ರವಚನಗನ್ನು ಕಲಿಯಬೇಕಾದ ಮಕ್ಕಳಿಗೆ ಟ್ಯೂನ್ ಹೆಸರಿನಲ್ಲಿ ಮತ್ತೆ ಒತ್ತಡ ಹಾಕುತ್ತಿದ್ದಾರೆ. ಮಕ್ಕಳಿಗೆ ಆಟ ವಾಡಲು ಸಮಯ ನೀಡದೆ, ಮಕ್ಕಳ ಕೈಗೆ ಮೊಬೈಲ್ ನೀಡಿ ಮಕ್ಕಳು ಏಕಾಂತದಲ್ಲಿ ಬಂದಿಗಳಾಗುವಂತೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಕ್ಕಳಿಗೆ ಓದುವಂತೆ ಒತ್ತಡ ಹಾಕದೆ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಕರೆ ನೀಡಿದರು.

ಪಟ್ಟಣದ ಶತಮಾನದ ಶಾಲೆ ಆವರಣದಲ್ಲಿ ಕೆಪಿಎಸ್ ಸ್ಕೂಲ್‌ ವತಿಯಿಂದ ಆಯೋಜಿಸಿದ್ದ ಮಕ್ಕಳ ಹಬ್ಬದಲ್ಲಿ ಮಾತನಾಡಿ, ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾಗಿರುವ ಪೋಷಕರು ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಆಂಗ್ಲ ಮಾಧ್ಯಮದಲ್ಲಿಯೇ ಕಲಿಯುವಂತೆ, ಡಾಕ್ಟರ್, ಎಂಜಿನಿಯರ್ ಆಗಬೇಕೆಂದು ಒತ್ತಡ ಹಾಕಿ ಮಕ್ಕಳ ಮನಸ್ಸು ಖಿನ್ನತೆಗೆ ಒಳಗಾಗುವಂತೆ ಮಾಡುತ್ತಿದ್ದಾರೆ ಎಂದರು.

ಆಟವಾಡಿಕೊಂಡು ಸಂತೋಷದಿಂದ ಪಾಠ ಪ್ರವಚನಗನ್ನು ಕಲಿಯಬೇಕಾದ ಮಕ್ಕಳಿಗೆ ಟ್ಯೂ,ನ್ ಹೆಸರಿನಲ್ಲಿ ಮತ್ತೆ ಒತ್ತಡ ಹಾಕುತ್ತಿದ್ದಾರೆ. ಮಕ್ಕಳಿಗೆ ಆಟ ವಾಡಲು ಸಮಯ ನೀಡದೆ, ಮಕ್ಕಳ ಕೈಗೆ ಮೊಬೈಲ್ ನೀಡಿ ಮಕ್ಕಳು ಏಕಾಂತದಲ್ಲಿ ಬಂದಿಗಳಾಗುವಂತೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಮಕ್ಕಳಿಗಾಗಿ ಪೋಷಕರು ಆಸ್ತಿ ಹಣ ಸಂಪಾದನೆ ಮಾಡಿ ಕೂಡಿಡುವ ಬದಲಿಗೆ ನಿಮ್ಮ ಮಕ್ಕಳನ್ನೇ ನಾಗರೀಕ ಸಮಾಜಕ್ಕೆ ಆಸ್ತಿಯಾಗಿ ಕೊಡುಗೆ ನೀಡಿ ಸಾಧನೆ ಮಾಡಲು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಕೆಪಿಎಸ್ ಶಾಲೆ ಪ್ರಾಂಶುಪಾಲ ಡಿ.ಬಿ.ಸತ್ಯ ಅಧ್ಯಕ್ಷತೆ ವಹಿಸಿದ್ದರು. ಬಿಇಒ ತಿಮ್ಮೇಗೌಡ, ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಆರ್. ಪುಟ್ಟಸ್ವಾಮಿ, ಮಂಜುಳಾ, ಗಂಗಾಧರ್, ಸಿ.ಬಿ. ಚೇತನಕುಮಾರ್, ಕೆ.ಆರ್. ಪೇಟೆ ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ಮೋಹನ್, ಶತಮಾನದ ಶಾಲೆ ಉಪಪ್ರಾಂಶುಪಾಲ ತಿಮ್ಮೇಗೌಡ, ಹಿರಿಯ ಉಪನ್ಯಾಸಕ ಡಿ.ಟಿ. ಪುಲಿಗೆರಯ್ಯ, ರಾಘವೇಂದ್ರ, ಅಶೋಕ್, ಬಸವರಾಜ್ ಸೇರಿದಂತೆ ಮಕ್ಕಳ ಪೋಷಕರು ಇದ್ದರು.

ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಎಂ.ರೂಪ ಆಯ್ಕೆ

ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮನ್ಮುಲ್)ದ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮದ್ದೂರು ತಾಲೂಕಿನಿಂದ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಎಂ.ರೂಪ ಆಯ್ಕೆಯಾಗಿದ್ದಾರೆ.

ನಿರ್ದೇಶಕರ ಸ್ಥಾನಗಳಿಗೆ ಫೆ.2ರಂದು ಚುನಾವಣೆ ಘೋಷಣೆಯಾಗಿದೆ. ಮದ್ದೂರು ತಾಲೂಕಿನಿಂದ ಬಿಜೆಪಿ- ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎಂ.ರೂಪ ಅವರನ್ನು ಘೋಷಣೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಆದೇಶ ಹೊರಡಿಸಿದ್ದಾರೆ.

Share this article