ಮಕ್ಕಳು ಆಟದ ಜೊತೆಗೆ ಓದಿನ ಕಡೆಯೂ ಗಮನಹರಿಸಬೇಕು. ಪರಿಶ್ರಮದಿಂದ ಪ್ರತಿಫಲ ಸಾಧ್ಯ.
ಕನ್ನಡಪ್ರಭ ವಾರ್ತೆ ಉಡುಪಿ
ಇಂದು ಮಕ್ಕಳು ತಮಗಿಷ್ಟವಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಓದಿನ ಒತ್ತಡವನ್ನು ಮರೆತು ತಮಗಿಷ್ಟವಾದ ಚಟುವಟಿಕೆಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು. ಇದರಿಂದ ಮಕ್ಕಳ ಭೌತಿಕ ಹಾಗೂ ಮಾನಸಿಕ ವಿಕಾಸದೊಂದಿಗೆ ದೈಹಿಕವಾಗಿಯೂ ಸದೃಢರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು.ಅವರು ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಆಟದ ಜೊತೆಗೆ ಓದಿನ ಕಡೆಯೂ ಗಮನಹರಿಸಬೇಕು. ಪರಿಶ್ರಮದಿಂದ ಪ್ರತಿಫಲ ಸಾಧ್ಯ. ಮುಂದಿನ ದಿನಗಳಲ್ಲಿ ಉತ್ತಮ ಜೀವನ ಸಾಗಿಸಲು ಈಗಿನಿಂದಲೇ ಪ್ರಯತ್ನಿಸಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಮಕ್ಕಳು ದೇಶದ ಸಂಪತ್ತು. ಶಿಕ್ಷಣ ವ್ಯವಸ್ಥೆಯು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವಂತಾಗಬಾರದು. ಮಕ್ಕಳಿಗೆ ಕನಸು ಹಾಗೂ ಭವಿಷ್ಯವನ್ನು ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಹಾಗೂ ಚೈತನ್ಯ ಹೊಂದಿರುತ್ತಾರೆ. ಪೋಷಕರು ತಮ್ಮ ಮಕ್ಕಳ ಕನಸನ್ನು ನನಸಾಗಿಸಲು ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸಿರುವುದು ಉತ್ತಮ ಸಂಗತಿ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಮಾನತೆ ಕಲ್ಪಿಸುವುದರೊಂದಿಗೆ ಅವರುಗಳಲ್ಲಿ ಕ್ರಿಯಾಶೀಲತೆ, ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದವರು ಹೇಳಿದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಬಿ ಫುಟಾರ್ಡೊ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಾಗರಾಜ್, ಕ್ರೀಡಾ ಇಲಾಖೆಯ ರವಿಚಂದ್ರ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೂಪ ನಿರೂಪಿಸಿ, ವಂದಿಸಿದರು.ಈ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಜಾನಪದ ನೃತ, ಸಂಗೀತ, ಚಿತ್ರಕಲೆ, ಕಥೆ ಬರೆಯುವುದು, ನಾಟಕ, ಮನೋರಂಜನಾ ಆಟ, ಖೋ-ಖೋ ಹಾಗೂ ಕಬಡ್ಡಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸುಮಾರು 350 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.